ಉಮ್ಮರ್ ಕೊಲೆ ಆರೋಪಿಗೆ ಗುಂಡೇಟು

khalil new
Published on

ಬಂಟ್ವಾಳ/ ಉಪ್ಪಿನಂಗಡಿ: ಮೆಲ್ಕಾರ್ ಬಳಿಯ ಗುಡ್ಡೆಅಂಗಡಿಯ ಬೋಗೊಡಿಯಲ್ಲಿ ರೌಡಿ ಶೀಟರ್ ಉಮ್ಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ ಎಂಬಾತನನ್ನು ಮಾರಕಾಯುಧದಿಂದ ಕಡಿದು ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಮೇಲೆ ಶನಿವಾರ ಮುಂಜಾನೆ ಎಂಜಿರ ಸಮೀಪದ ನೇಲ್ಯಡ್ಕ ಬಳಿ ಬಂಟ್ವಾಳ ಪೊಲೀಸರು ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ನಂದಾವರ ನಿವಾಸಿ ರೌಡಿಶೀಟರ್ ಖಲೀಲ್ ಗಾಯಗೊಂಡಿದ್ದಾನೆ. ಆತನ ಕಾಲಿಗೆ ಗಾಯವಾಗಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಆರೋಪಿ ಖಲೀಲ್ ಹಾಗೂ ಇತರ ಇಬ್ಬರು ಆರೋಪಿಗಳು ಶಿರಾಡಿಘಾಟ್ ಮೂಲಕ ಬೆಂಗಳೂರು ಕಡೆಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಬಂಟ್ವಾಳದಿಂದ ಬೆನ್ನಟ್ಟಿದ ಪೊಲೀಸರು ಎಂಜಿರ ಸಮೀಪದ ನೇಲ್ಯಡ್ಕ ಬಳಿ ಆರೋಪಿಗಳನ್ನು ಅಡ್ಡಗಟ್ಟಿದ್ದರು. ಈ ಸಂದರ್ಭ ಆರೋಪಿ ಖಲೀಲ್ ಪೊಲೀಸರ ಮೇಲೆ ತಲವಾರು ದಾಳಿ ನಡೆಸಿದ. ತಕ್ಷಣ ಜಾಗೃತಗೊಂಡ ಬಂಟ್ವಾಳ ನಗರ ಠಾಣಾ ಎಸೈ ಅವಿನಾಶ್ ಗುಂಡಿನ ದಾಳಿ ನಡೆಸಿದ್ದು, ಖಲೀಲ್ ಕಾಲಿಗೆ ಗುಂಡು ತಾಗಿದೆ.

ಮತ್ತಿಬ್ಬರು ವಶಕ್ಕೆ?: ಘಟನೆಯಲ್ಲಿ ಎಸೈ ಪ್ರಸನ್ನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಲೀಲ್ ಜತೆಗಿದ್ದ ಮತ್ತೋರ್ವ ಆರೋಪಿ ಹಫೀಜ್(28) ಹಾಗೂ ಕಾರು ಚಾಲಕ ತಪ್ಪಿಸಿಕೊಂಡರೂ, ಉಪ್ಪಿನಂಗಡಿ ಎಸ್.ಐ.ಈರಯ್ಯ ನೇತೃತ್ವದ ತಂಡ ವಶಕ್ಕೆ ಪಡೆದಿದೆ.

ಗಡೀಪಾರಾಗಿದ್ದ

ಪ್ರಕರಣದ ಪ್ರಮುಖ ಆರೋಪಿ ಖಲೀಲ್ ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೋಮು ಗಲಭೆ ಸಹಿತ ಆನೇಕ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ. ಈತನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದ್ದು, ಇತ್ತೀಚೆಗೆ ರತ್ನಾಕರ ಶೆಟ್ಟಿ ಹಲ್ಲೆ ಪ್ರಕರಣದಲ್ಲಿ ಆತನನ್ನು ಗಡೀಪಾರು ಮಾಡಲಾಗಿತ್ತು. ಬಂಟ್ವಾಳದ ಮೆಲ್ಕಾರ್ ಬಳಿ ಶುಕ್ರವಾರ ಸಂಜೆ ಬೈಕ್‌ನಲ್ಲಿ ಹೋಗುತ್ತಿದ್ದ ಉಮ್ಮರ್ ಫಾರೂಕ್‌ನನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಮಾರಾಕಾಯುಧಗಳಿಂದ ದಾಳಿ ನಡೆಸಿ ಆತನನ್ನು ಕೊಲೆ ಮಾಡಿದ್ದರು. ಆರೋಪಿಗಳ ಪತ್ತೆಗೆ ಎಸ್.ಪಿ.ಲಕ್ಷ್ಮೀಪ್ರಸಾದ್ ವಿಶೇಷ ತಂಡ ರಚನೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net