

ಕೊಳ್ಳೇಗಾಲ: ಜಿಲ್ಲಾಧಿಕಾರಿ ಆದೇಶದಂತೆ ಪಟ್ಟಣದಲ್ಲಿ ಅಧಿಕೃತ ಹಾಗೂ ಅನಧಿಕೃತವಾಗಿ ಪಟಾಕಿ ದಾಸ್ತಾನು ಮಾಡಿರುವ ಅಂಗಡಿಗಳ ಮೇಲೆ ತಹಸೀಲ್ದಾರ್ ಮಂಜುಳಾ ತಂಡ ಶುಕ್ರವಾರ ದಾಳಿ ನಡೆಸಿದೆ.
ಇತ್ತೀಚೆಗೆ ತಮಿಳುನಾಡಿನಿಂದ ಲಾರಿ ಮೂಲಕ ಬೆಂಗಳೂರಿನ ಅತ್ತಿಬೆಲೆಗೆ ಬಂದ ಪಟಾಕಿಯನ್ನು ದಾಸ್ತಾನು ಮಳಿಗೆಯಲ್ಲಿ ಇಳಿಸುವ ವೇಳೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ ದುರಂತದಲ್ಲಿ ಹಲವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ರೀತಿ ಅವಘಡ ನಡೆಯದಂತೆ ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಭೆ ನಡೆಸಿ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕೃತ ಹಾಗೂ ಅನಧಿಕೃತವಾಗಿ ಸ್ಫೋಟಕ, ಪಟಾಕಿ ತಯಾರಿಕೆ ದಾಸ್ತಾನು ಮಾಡುವ ಮಳಿಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಮಿತಿ ರಚಿಸಿದ್ದರು. ಆಯಾ ತಾಲೂಕಿನ ತಹಸಿಲ್ದಾರ್‌ಅನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದರು.
ಅದರಂತೆ ಕೊಳ್ಳೇಗಾಲದ ತಹಸೀಲ್ದಾರ್ ಮಂಜುಳಾ ಅಧಿಕಾರಿಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಜಿ.ಪಿ.ಮಲ್ಲಪ್ಪಪುರಂ ಬಡಾವಣೆ, ಆಶ್ರಯ ಬಡಾವಣೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಶೇಖರಿಸಿದ್ದ ಪಟಾಕಿಗಳನ್ನು ವಶಕ್ಕೆ ಪಡೆದಿದ್ದು ಮಾಲೀಕರ ಮೇಲೆ ಕ್ರಮವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣಪ್ಪ, ನಗರಸಭೆ ಪೌರಾಯುಕ್ತ ಪ್ರಸನ್ನ, ಉಪನಿರೀಕ್ಷಕ ಮಹೇಶ್, ರಾಜಸ್ವ ನಿರೀಕ್ಷಕ ನಿರಂಜನ್, ಗ್ರಾಮ ಲೆಕ್ಕಿಗ ಅನಿಲ್, ಹಿರಿಯ ಹೆಲ್ತ್ ಇನ್ಸ್‌ಪೆಕ್ಟರ್ ಚೇತನ್, ತಾಪಂ ಸಹಾಯಕ ನಿರ್ದೇಶಕ ಗೋಪಾಲಕೃಷ್ಣ, ಕೆಇಬಿ ಎಇಟಿ ಮಹೇಶ್, ಅಗ್ನಿ ಶಾಮಕ ದಳದ ಎಚ್.ಸಿ. ಸಿದ್ಧಾರ್ಥ ಮತ್ತಿತರರಿದ್ದರು.