

ಇಂಡಿ: ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಕೆಲವೊಂದು ಕಡೆ ತಾತ್ಕಾಲಿಕ ಹಾಗೂ ಖಾಯಂ ವ್ಯಾಪಾರಸ್ಥರು ಪಟಾಕಿ ಮಾರಾಟ ಮಾಡಲು ತಾಲೂಕು ಆಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಕಚೇರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟ್ಟಣ ಮತ್ತು ತಾಲೂಕಿನ ವಿವಿಧ ಪಟಾಕಿ ವ್ಯಾಪಾರಸ್ಥರು, ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕು ಆಡಳಿತಕ್ಕೆ ಸೋಮವಾರದೊಳಗೆ ದಾಖಲಾತಿಗಳನ್ನು ಸಲ್ಲಿಸಿ ಪರವಾನಗಿ ಪಡೆದುಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌ರು ಸಮೀಕ್ಷೆ ನಡೆಸಿ ಪರವಾನಗಿಗೆ ಶಿಾರಸು ಮಾಡಬೇಕು. ವ್ಯಾಪಾರಸ್ಥರು ಪಟಾಕಿಗಳನ್ನು ಮಾರಾಟ ಮಾಡಲು ತಾತ್ಕಾಲಿಕ ಮಳಿಗೆ ಹಾಕಲು ವಿಜಯಪುರ ರಸ್ತೆಯಲ್ಲಿರುವ ಟಿಎಪಿಎಸ್‌ಎಂಸ್ ಕಟ್ಟಡದ ಮುಂದಿರುವ ವಿಶಾಲ ಮೈದಾನದಲ್ಲಿ ಸುರಕ್ಷತೆ ವಿಧಾನಗಳನ್ನು ಅಳವಡಿಸಿಕೊಂಡಿರುವುದನ್ನು ಖಾತ್ರಿ ಪಡಿಸಿಕೊಂಡು ಪರವಾನಗಿಗೆ ಸಂಬಂಧಿಸಿದ ಅಧಿಕಾರಿಗಳು ಶಿಾರಸು ಮಾಡಬೇಕು. ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಪರವಾನಗಿ ನೀಡಲಾಗುವುದು. ಅಂಗಡಿಗಳಲ್ಲಿ ಅಗತ್ಯಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಪಟಾಕಿಗಳ ಸಂಗ್ರಹಣೆ ಮಾಡಕೂಡದು. ಬೆಂಕಿ ಅವಘಡ ಸಂಭವಿಸದಂತೆ ಮರುಳು ನೀರು, ಅಗ್ನಿ ನಿರೋಧಕ ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿಕೊಂಡಿರುವ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸಿದ ನಂತರವೇ ತಹಸೀಲ್ದಾರರು ಪರವಾನಗಿಗೆ ಶಿಾರಸು ಮಾಡಬೇಕು ಎಂದರು.
ಗ್ರಾ.ಪಂ ಪ್ರದೇಶದಲ್ಲಿ ಅಂಗಡಿಗಳ ನಡುವೆ ಸಾಕಷ್ಟು ಅಂತರ ಇರುವಂತೆ ನೋಡಿಕೊಳ್ಳಬೇಕು. ಸಂತೆ, ಶಾಲೆ, ಹೆಚ್ಚು ಜನಸಂದಣಿ ಇರುವ ಕಡೆ ಪಟಾಕಿ ಅಂಗಡಿ ಹಾಕದಂತೆ ನೋಡಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಸಿ.ಪಿ.ಐ ರತನಕುಮಾರ ಜಿರಗಿಹಾಳ, ಎಸ್.ಜಿ.ತೇಲಿ, ಲೋಕೋಪಯೊಗಿ ಇಲಾಖೆಯ ಎಇಇ ಸಂಜವಾಡ, ವ್ಯಾಪಾರಸ್ಥರಾದ ರೂಪಾಲಿ ಧನಶೆಟ್ಟಿ, ರಮೇಶ ಏಳಗಿ, ಮಾರುತಿ ದಶವಂತ, ಮಹೇಶ ಮೇತ್ರಿ, ರವಿಕಾಂತ ವಾಲಿಕಾರ ಇತರರಿದ್ದರು.