

ಕೋಲಾರ: ಬೆಳಕಿನ ಹಬ್ಬವಾದ ದೀಪಾವಳಿಯಲ್ಲಿ ಪಟಾಕಿ ಸಿಡಿಸುವಾಗ ತಾಲೂಕಿನ ವಿವಿಧೆಡೆ 20 ಕ್ಕೂ ಹೆಚ್ಚು ಮಂದಿ ಮಕ್ಕಳು, ಹಿರಿಯರು, ಸಣ್ಣಪುಟ್ಟ ಕಣ್ಣಿನ ಸಮಸ್ಯೆಗಾಗಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಧಾವಿಸಿದ್ದು, ನಗರದ ವಿವೇಕ ನೇತ್ರಾಲಯದಲ್ಲಿ ಬಾಲಕರಿಬ್ಬರ ಕಾರ್ನಿಯಾಗೆ ಗಾಯವಾಗಿದ್ದು, ಚಿಕಿತ್ಸೆ ನೀಡಿದ್ದಾಗಿ ನೇತ್ರ ತಜ್ಞ ಡಾ.ಎಚ್.ಆರ್.ಮಂಜುನಾಥ್ ತಿಳಿಸಿದರು.
ಪರಿಸರ ಕಾಳಜಿಯಿಂದ ಅನೇಕರು ಪಟಾಕಿ ಸಿಡಿಸಿದ ಪ್ರಮಾಣ ಕಡಿಮೆಯಾಗಿದೆ ಮತ್ತು ಸಿಡಿಸುವಾಗ ಜಾಗೃತಿ ವಹಿಸಬೇಕೆಂಬ ಅರಿವು ಜನರಲ್ಲಿ ಬಂದಿರುವ ಕಾರಣ ಈ ಬಾರಿ ದೃಷ್ಟಿದೋಷದಂತಹ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲ. ಆಸ್ಪತ್ರೆಗೆ ಬಂದವರಲ್ಲಿ ಓರ್ವ ಯುವಕ ಸೇರಿ ಉಳಿದ 8 ಮಂದಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಾರೆ ಎಂದರು.
ಮುನ್ನಚ್ಚರಿಕೆಯಿಂದಾಗಿ ದಿನದ 24 ಗಂಟೆಯೂ ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದ್ದು, ಸಂಪೂರ್ಣ ದೃಷ್ಟಿಹಾನಿಯಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ. ಪಟಾಕಿಗಿಂತ ಅದರಿಂದ ಸಿಡಿಯುವ ಮಣ್ಣು ಮಿಶ್ರಿತ ರಾಸಾಯನಿಕದಿಂದಲೂ ಹಾನಿಯಾಗಿದೆ ಎಂದರು.
ಸುಟ್ಟ ಗಾಯಗಳಿಗೆ ಆಯುರ್ವೇದ ಚಿಕಿತ್ಸೆ: ನಗರದ ಹಳೇ ಮಾಧ್ಯಮಿಕ ಶಾಲೆ ಎದುರಿಗಿರುವ ವೆಂಕಟೇಶಯ್ಯಶೆಟ್ಟಿ ಸುಟ್ಟಗಾಯಗಳ ಚಿಕಿತ್ಸಾಯಲಯದಲ್ಲಿ ಸಣ್ಣಪುಟ್ಟ 25ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಪಾರಂಪರಿಕ ವೈದ್ಯ ವಿ.ಮಂಜುನಾಥ್ ಹೇಳುವಂತೆ ಈ ಬಾರಿ ಅನಾಹುತಗಳ ಸಂಖ್ಯೆ ಕಡಿಮೆಯಾಗಿದೆ, ಜನರಲ್ಲಿ ಅರಿವು ಬಂದಿದೆ.
ಪ್ರತಿವರ್ಷ ಅಡುಗೆ ಎಣ್ಣೆ, ಪಟಾಕಿ ಬೆಂಕಿಯ ಸುಟ್ಟ ಗಾಯಗಳ 25ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಾರಿ ಕಡಿಮೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿ, ಜನತೆಯಲ್ಲಿ ಮತ್ತಷ್ಟು ಅರಿವು ಮೂಡಲಿ ಎಂದು ಆಶಿಸಿದರು.
ಎಸ್ಎನ್ಆರ್ ಆಸ್ಪತ್ರೆ ಒಂದು ಪ್ರಕರಣ: ಜಿಲ್ಲಾಸ್ಪತ್ರೆಯಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿರುವ ಒಂದೆರಡು ಪ್ರಕರಣ ವರದಿಯಾಗಿದ್ದು, ಕಣ್ಣಿಗೆ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಉಳಿದಂತೆ ಶಂಕರ್ ಕಣ್ಣಿನ ಆಸ್ಪತ್ರೆ, ಜಾಲಪ್ಪ ಆಸ್ಪತ್ರೆ, ಜಿಇಎಫ್ ರೋಟರಿ ಕಣ್ಣಿನ ಆಸ್ಪತ್ರೆ ಮತ್ತಿತರರೆಡೆ ಪಟಾಕಿ ಅನಾಹುತದಿಂದ ಚಿಕಿತ್ಸೆಗೆ ಬಂದವರ ಸಂಖ್ಯೆ ಕಡಿಮೆಯಿದ್ದು, ಒಟ್ಟಾರೆ ಜನರಲ್ಲಿ ಅರಿವು ಮೂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.