ಮಂಡ್ಯದ ಜಿ.ಕೆಬ್ಬಹಳ್ಳಿಯಲ್ಲಿ ಪಟಾಕಿ ದುರಂತ: ಮದ್ದು ಸಿಡಿದು ತಮಿಳುನಾಡು ಮೂಲದ ಕಾರ್ಮಿಕ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ

Firework disaster Labor death G.Kebbahalli village mandya
Published on

ಮಂಡ್ಯ: ತಾಲೂಕಿನ ಜಿ.ಕೆಬ್ಬಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಪಟಾಕಿ ಮದ್ದು ಸಿಡಿದು ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಮಿಳುನಾಡು ಮೂಲದ ರಮೇಶ್(50) ಮೃತ. ಕೆಬ್ಬಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯುವ ಕಾಲಭೈರವೇಶ್ವರ ಹಬ್ಬಕ್ಕೆಂದು ಪಟಾಕಿ ಸಿಡಿಸುವ ಜವಾಬ್ದಾರಿಯನ್ನು ತಮಿಳುನಾಡು ಮೂಲದ ವ್ಯಕ್ತಿಗಳಿಗೆ ನೀಡಲಾಗಿತ್ತು. ಅದರಂತೆ ನಾಲ್ವರು ಗ್ರಾಮಕ್ಕೆ ಬಂದು ಆಲೆಮನೆಯೊಂದರಲ್ಲಿ ವಾಸ್ತವ್ಯವಿದ್ದರು.

ಭಾನುವಾರ ರಾತ್ರಿ ಹಬ್ಬ ಮುಗಿದಿದೆ. ಸೋಮವಾರ ಬೆಳಗ್ಗೆ ಆಲೆಮನೆಯಲ್ಲಿ ಮೂವರು ಕಾರ್ಮಿಕರು ನಿದ್ರೆ ಮಾಡುತ್ತಿದ್ದಾಗ ಮತ್ತೊಬ್ಬ ಮದ್ದು ತುಂಬುವ ವೇಳೆ ಅವಘಡ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಆಲೆಮನೆ ಹೆಂಚು ಹಾರು ಹೋಗಿದ್ದು, ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಮಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾಹಿತಿಗೆ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲಿಸಿದರು. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net