ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ತಡೆಗೆ ಫೈರ್‌ಲೈನ್

Oplus_131072
Oplus_131072
Published on

ಯಳಂದೂರು: ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಫೈರ್‌ಲೈನ್ ಕಾಮಗಾರಿ ಭರದಿಂದ ಸಾಗಿದ್ದು, ಕಾಳ್ಗಿಚ್ಚು ತಡೆಗಟ್ಟಲು ಅರಣ್ಯ ಇಲಾಖೆ ಸ್ಥಳೀಯ ಸೋಲಿಗರ ಸಹಕಾರದೊಂದಿಗೆ ಬೆಂಕಿರೇಖೆಯನ್ನು ನಿರ್ಮಿಸುವ ಕಾರ್ಯ ಮಾಡಲಾಗುತ್ತಿದೆ.

ಅರಣ್ಯ ಪ್ರದೇಶದಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ಮಳೆ ಹೆಚ್ಚಾಗಿದ್ದ ಕಾರಣ ಎಲ್ಲೆಡೆ ನೀರಿನ ಒರೆತ ಇತ್ತು. ಇಲ್ಲಿನ ಬಹುತೇಕ ಕೆರೆಕಟ್ಟೆಗಳು ತುಂಬಿದ್ದವು. ಈ ಅವಧಿಯಲ್ಲಿ ಕಾಳ್ಗಿಚ್ಚಿನ ಪ್ರಮಾಣವೂ ಕಡಿಮೆ ಇತ್ತು.

ಬಿಆರ್‌ಟಿ ಅರಣ್ಯ ಪ್ರದೇಶದ ವ್ಯಾಪ್ತಿಯ ಸೋಲಿಗರ ಪೋಡುಗಳಲ್ಲಿ ಸಭೆಗಳನ್ನು ಮಾಡಿ ಆ ಮೂಲಕ ಬೇಸಿಗೆಯಲ್ಲಿ ಸಂಭವಿಸುವ ಕಾಳ್ಗಿಚ್ಚು ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ವಾಹನ ಸವಾರರಿಗೂ ಅರಿವನ್ನು ಮೂಡಿಸುವ ಜತೆಗೆ ನಿಗಾವಹಿಸುವ ಕೆಲಸವನ್ನೂ ಅರಣ್ಯ ಇಲಾಖೆ ಮಾಡುತ್ತಿದೆ.

ಗ್ರಾಪಂ, ಪೊಲೀಸ್, ಕಂದಾಯ ಇಲಾಖೆಯೂ ಭಾಗಿ: ಕಾಳ್ಗಿಚ್ಚನ್ನು ನಿಯಂತ್ರಿಸಲು ಈ ಬಾರಿ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯನ್ನು ಸೇರ್ಪಡೆಗೊಳಿಸಲಾಗಿದೆ. ಈ ಇಲಾಖೆಗಳು ಜನಸಂಪರ್ಕಕ್ಕೆ ಹೆಚ್ಚಾಗಿ ಬರುವುದರಿಂದ ಕಾಡಿನಲ್ಲಿ ಬೆಂಕಿ ಕಂಡು ಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ. ಈ ಬಾರಿ ಹೊಸ ಪ್ರಯೋಗ ಮಾಡಲಾಗಿದ್ದು ಬೆಂಕಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹೊಸ ಹೆಜ್ಜೆಯನ್ನಿಟ್ಟಿದೆ.

ಅಪರೂಪದ ಕಾಡು: ಶೋಲ, ನಿತ್ಯ ಹರಿದ್ವರ್ಣ, ಅರೆನಿತ್ಯ ಹರಿದ್ವರ್ಣ, ಎಲೆ ಉದುರುವ ಕಾಡು ಸೇರಿದಂತೆ 6 ವಿಭಿನ್ನ ಸಸ್ಯ ವರ್ಗಗಳ ಪ್ರಭೇದ ಹೊಂದಿರುವ ಅಪರೂಪದ ಕಾಡು ಇದಾಗಿದೆ. ಪೂರ್ವ ಹಾಗೂ ಪಶ್ಚಿಮ ಘಟ್ಟಗಳು ಸಂಧಿಸುವ ಬೆಟ್ಟ ಇದಾಗಿರುವುದರಿಂದ ಇಲ್ಲಿ ಭಿನ್ನ ಪರಿಸರವನ್ನು ಕಾಣಬಹುದು. ಕಾಡಿನಲ್ಲಿ ಈಗಾಗಲೇ ಮರಗಳಲ್ಲಿ ಎಲೆ ಉದುರುತ್ತಿದೆ. ಮುಖ್ಯ ರಸ್ತೆಯ ಬದಿಗಳು, ಕಾಡೊಳಗೆ ಇರುವ ಗೇಮ್‌ರಸ್ತೆ, ಪೋಡುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಬೆಂಕಿ ರೇಖೆಯನ್ನು ನಿರ್ಮಾಣ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕೆ ತರಬೇತಿ ಪಡೆದ ಸಿಬ್ಬಂದಿ ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಯಳಂದೂರು ಹಾಗೂ ಕೆ. ಗುಡಿ ವಲಯದಲ್ಲಿ ಫೈರ್‌ಲೈನ್ ಕಾಮಗಾರಿ ಬಿರುಸು ಪಡೆದುಕೊಂಡಿದೆ.

ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳ: ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಯಳಂದೂರು ಹಾಗೂ ಕೆ.ಗುಡಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಿಳಿಗಿರಿರಂಗನಬೆಟ್ಟದ ದೇವಸ್ಥಾನಕ್ಕೆ ಹಾಗೂ ಕೆ. ಗುಡಿಯಲ್ಲಿರುವ ಸಫಾರಿಗೆ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ಹಾಗಾಗಿ ಅರಣ್ಯ ಇಲಾಖೆ ಬೆಂಕಿ ಅವಘಡಗಳನ್ನು ತಪ್ಪಿಸಲು ವಿಶೇಷ ಕಾಳಜಿ ವಹಿಸಿದೆ. ಬೇಸಿಗೆ ಮುಗಿಯುವವರೆಗೂ ರಸ್ತೆಯಲ್ಲಿ ತನ್ನ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆ.

ಬಿಆರ್‌ಟಿ ಅರಣ್ಯ ಪ್ರದೇಶದ ಯಳಂದೂರು ಹಾಗೂ ಕೆ.ಗುಡಿ ವಲಯದ ವ್ಯಾಪ್ತಿಯ 230 ಚ.ಕಿ.ಮೀ.ನಲ್ಲಿ ರಸ್ತೆಯ ಎರಡೂ ಬದಿಯಲ್ಲಿ 10 ಮೀಟರ್ ಉದ್ದದವರೆಗೂ ಬೆಳೆದಿರುವ ಗಿಡಗಂಟಿ, ಹುಲ್ಲುಗಳನ್ನು ಕಾಂಡದ ತನಕ ಕತ್ತರಿಸಿ ಬೆಂಕಿ ಹಾಕಿ ಸುಡುವ ಮೂಲಕ ಫೈರ್‌ಲೈನ್ ಮಾಡಲಾಗುತ್ತದೆ. ಇದರಿಂದ ಕಾಳ್ಗಿಚ್ಚು ನಿಯಂತ್ರಿಸುವ ಜತೆಗೆ ರಸ್ತೆದಾಟಲು ಬರುವ ಪ್ರಾಣಿಗಳು ವಾಹನಗಳಿಗೆ ಸಿಲುಕುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾಗಿದೆ. ಕಳೆದ ಹಲವು ದಿನಗಳಿಂದ ಅರಣ್ಯ ಸಿಬ್ಬಂದಿ ಈ ಕೆಲಸವನ್ನು ಮಾಡುತ್ತಿದ್ದಾರೆ. ನಾಗೇಂದ್ರನಾಯಕ್ ಆರ್‌ಎಫ್‌ಒ ಯಳಂದೂರು ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net