ಕಾಲಿಗೆ ಗುಂಡಿಕ್ಕಿ ರೌಡಿಗಳಿಬ್ಬರ ಬಂಧನ, ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆ, ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳು

ROWDY
Published on

ಬೆಂಗಳೂರು: ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ತಲೆಮರೆಸಿಕೊಂಡು ತಿರುಗುತ್ತಿದ್ದ ಇಬ್ಬರು ರೌಡಿಗಳನ್ನು ಸಿಸಿಬಿ ಪೊಲೀಸರು ಗುಂಡಿಕ್ಕಿ ಸೆರೆ ಹಿಡಿದಿದ್ದಾರೆ.

ಸತೀಶ್ ಅಲಿಯಾಸ್ ಶೆಡ್ಕಾ (30) ಹಾಗೂ ಹಂದಿ ಮಹೇಶ್ (30) ಬಂಧಿತರು. ಹಲ್ಲೆಗೆ ಒಳಗಾದ ಪೇದೆ ಹನುಮೇಶ್ ಹಾಗೂ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕೊಲೆ ಕೇಸ್​ನಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದರು. ಬಿಟಿಎಂ ಲೇಔಟ್​ನ ರಂಕಾ ಕಾಲನಿಯಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ ಸಿಸಿಬಿ ಇನ್​ಸ್ಪೆಕ್ಟರ್ ಪುನೀತ್ ಮತ್ತು ಕೇಶವಮೂರ್ತಿ ನೇತೃತ್ವದ ಪೊಲೀಸರ ತಂಡ ಸೋಮವಾರ ನಸುಕಿನ 5 ಗಂಟೆಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಬಂಧಿಸಲು ಮುಂದಾದ ಪೇದೆ ಹನುಮೇಶ್ ಮೇಲೆ ಆರೋಪಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಇನ್​ಸ್ಪೆಕ್ಟರ್

ಪುನೀತ್ ಗಾಳಿಯಲ್ಲಿ ಒಂದು ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಅದನ್ನು ಲೆಕ್ಕಿಸದೆ ಪೇದೆ ಮೇಲೆ ಹಲ್ಲೆಗೆ ಮುಂದಾದಾಗ ಕೇಶವಮೂರ್ತಿ ಮತ್ತು ಪುನೀತ್ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಸಿಸಿಬಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಆರೋಪಿ ಸತೀಶ್ 2011ರಿಂದ 5 ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದು ಕೋರಮಂಗಲ ಮತ್ತು ಶಿಡ್ಲಘಟ್ಟ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದಾನೆ. ಇನ್ನೊಬ್ಬ ಆರೋಪಿ ಮಹೇಶ್ ಶಿಡ್ಲಘಟ್ಟ ಮತ್ತು ಬಾಗಲೂರಿನಲ್ಲಿ 2 ಕೊಲೆ ಕೇಸ್​ನಲ್ಲಿ ಶಾಮೀಲಾಗಿದ್ದು, ಶಿಡ್ಲಘಟ್ಟ ಠಾಣೆಯ ರೌಡಿ ಪಟ್ಟಿಯಲ್ಲಿ ಹೆಸರಿದೆ. 2016ರಲ್ಲಿ ಇಬ್ಬರು ಜತೆಗೂಡಿ ಶಿಡ್ಲಘಟ್ಟದ ಪುರಸಭೆ ಸದಸ್ಯನನ್ನು ಹತ್ಯೆಗೈದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net