

ಮಂಡ್ಯ: ತುರ್ತು ಕರೆಗೆ ಸದಾ ಸ್ಪಂದಿಸುವ ಅಗ್ನಿಶಾಮಕ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ದೊಡ್ಡಯ್ಯ ಪ್ರಶಂಸಿಸಿದರು.
ನಗರದ ಹೊರವಲಯದಲ್ಲಿರುವ ಅಗ್ನಿಶಾಮಕ ಠಾಣೆಯ ಕವಾಯತು ಮೈದಾನದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಆಯೋಜಿಸಿದ್ದ ಅಗ್ನಿಶಾಮಕ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಏನೇ ಅವಘಢ ಸಂಭವಿಸಿದರೂ ಮೊದಲಿಗೆ ಅಗ್ನಿಶಾಮಕ ಠಾಣೆಗೆ ಕರೆ ಬರುತ್ತವೆ. ಏಕೆಂದರೆ ಯಾವುದೇ ಸಂದರ್ಭದಲ್ಲೂ ಕರೆ ಮಾಡಿದರೂ ತುರ್ತು ಪರಿಸ್ಥಿಗೆ ಸ್ಪಂದಿಸುವ ಏಕೈಕ ಇಲಾಖೆ ಅಗ್ನಿಶಾಮಕ ಠಾಣೆ ಎಂಬ ಮನೋಭಾವ ಜನರ ಮನಸ್ಸಿನಲ್ಲಿ ಮೂಡಿದೆ ಎಂದರು.
ಬೆಂಕಿ ಅವಘಡ, ಪ್ರವಾಹ ಪರಿಸ್ಥಿತಿ ಉಂಟಾದಾಗಲೆಲ್ಲ ಅಗ್ನಿಶಾಮಕ ಠಾಣೆ ಅಧಿಕಾರಿ, ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯ ನಡೆಸುತ್ತಾರೆ. ಹಾಗಾಗಿ ಜನರಿಗೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಮೇಲೆ ಹೆಚ್ಚಿನ ನಂಬಿಕೆ ಹಾಗೂ ವಿಶ್ವಾಸ. ಈ ಹಿಂದೆ ರಾಜ್ಯದಲ್ಲಿ ಕೆಲವೇ ಕೆಲವು ಅಗ್ನಿಶಾಮಕ ಠಾಣೆಗಳಿದ್ದವು. ಆದರೀಗ ಪ್ರತಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆ ತೆರೆಯಲಾಗಿದ್ದು, ಸರ್ಕಾರ ತಾಂತ್ರಿಕ ಹಾಗೂ ಸುಸಜ್ಜಿತ ವಾಹನವನ್ನು ಇಲಾಖೆಗೆ ನೀಡಿದೆ. ಇದರಿಂದ ಅನಾಹುತ ಸಂಭವಿಸಿದಾಗ ತುರ್ತು ಕರೆಗೆ ಸ್ಪಂದಿಸಿ ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣಾ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು, ಇಲಾಖೆ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹಿಂದೆ ಇಲಾಖೆಯನ್ನು ಫೈಯರ್ ಬ್ರಿಗೇಡ್ ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ಅಗ್ನಿಶಾಮಕ ಠಾಣೆ ಎಂದಾಯಿತು. ಇದೀಗ ಅಗ್ನಿಶಾಮಕ ಮತ್ತು ತುರ್ತು ಸೇವೆ ಎಂದು ಗುರುತಿಸಿಕೊಂಡಿದೆ. ತುರ್ತು ಸಂದರ್ಭದಲ್ಲಿ ನಡೆಯುವ ಅನಾಹುತಕ್ಕೆ ಸ್ಪಂದಿಸುವ ಇಂತಹ ಇಲಾಖೆಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು. ಹುತಾತ್ಮರ ಹೆಸರಿನಲ್ಲಿ ಈ ರೀತಿಯ ಕಾರ್ಯಕ್ರಮ ಮಾಡುವುದು ಉತ್ತಮ ಕೆಲಸ. ಇದರಿಂದ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ. ಕುಟುಂಬ ವರ್ಗದವರಿಗೂ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ ಮಾತನಾಡಿ, 1944 ಏ.14 ರಂದು ಮುಂಬೈ ಬಂದರಿನ ವಿಕ್ಟೋರಿಯಾ ಡಾಕ್‌ನಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಎಸ್‌ಎಸ್ ಪೋರ್ಟ್ ಸ್ಟೈಕೈನ್ ಎಂಬ ಹಡಗು ಘೋರ ಅಗ್ನಿ ಅನಾಹುತಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಬೆಂಕಿ ನಂದಿಸಲು ಮುಂಬೈ ಫೈಯರ್ ಬ್ರಿಗೇಡ್‌ನ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾಗ ಹಡಗು ಸ್ಫೋಟಗೊಂಡಿತು. ಈ ವೇಳೆ 66 ಫೈಯರ್ ಬ್ರಿಗೇಡ್ ಅಧಿಕಾರಿ ಹಾಗೂ ಸಿಬ್ಬಂದಿ ವೀರ ಮರಣ ಹೊಂದಿದ್ದರು. ಈ ಹುತಾತ್ಮರ ನೆನಪಿಗಾಗಿ ಏ.14ರಂದು ಪ್ರತಿ ವರ್ಷ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ ಎಂದರು.
1995ರಲ್ಲಿ ಭಾರತದ ಅಂಚೆ ಇಲಾಖೆ ಇದರ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಅಗ್ನಿ ಸುರಕ್ಷತ ಭಾರತವನ್ನು ಹುಟ್ಟುಹಾಕಲು ಒಂದಾಗೋಣ ಎಲ್ಲರೂ ಶ್ರಮಿಸೋಣ ಎಂಬ ಘೋಷವಾಕ್ಯದಡಿ ಈ ಒಂದು ದಿನ ಆಚರಿಸಲಾಗುತ್ತಿದೆ. ಪ್ರತಿವರ್ಷ ಏ.14 ರಿಂದ 20 ರವರೆಗಿನ ಸಪ್ತಾಹವನ್ನು ದೇಶಾದ್ಯಂತ ಅಗ್ನಿಶಾಮಕ ಸೇವಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ಈ ಸಪ್ತಾಹದಲ್ಲಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆಯ ಬಗ್ಗೆ ತಿಳಿವಳಿಕೆ ನೀಡಿ, ಅಗ್ನಿ ಶಮನದ ಬಗ್ಗೆ ಅಣಕು ಪ್ರದರ್ಶನ ಆಯೋಜಿಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜಾಗೃತರಾಗಬೇಕು. ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಬಲಿದಾನಗೈದು ಅಮರರಾದ ವೀರ ಅಗ್ನಿಶಾಮಕರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾಧ್ಯಕ್ಷ ಜಿ.ಪಿ.ಭಕ್ತವತ್ಸಲ, ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್, ನಿವೃತ್ತ ಅಗ್ನಿಶಾಮಕ ಠಾಣಾಧಿಕಾರಿ ಶಿವಲಿಂಗಯ್ಯ, ನಿವೃತ್ತ ಅಗ್ನಿಶಾಮಕಾಧಿಕಾರಿಗಳಾದ ಪುಟ್ಟಸೋಮರಾಧ್ಯ, ಬೊಮ್ಮಯ್ಯ, ರಾಘವೇಂದ್ರ, ಪ್ರಮುಖ ಅಗ್ನಿಶಾಮಕ ಪ್ರಭಾಕರ್ ಶೆಟ್ಟಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಗಣ್ಯರು ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.