ಪಟಾಕಿ ವ್ಯಾಪಾರಿಗಳಿಗೆ ವರುಣಾಘಾತ

udp-pataki
Published on

ಉಡುಪಿ: ಜಿಲ್ಲೆಯಾದ್ಯಂತ ಕಳೆದ 1 ವಾರದಿಂದ ಸಾಯಂಕಾಲ ನಿರಂತರ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಪಟಾಕಿ ವ್ಯಾಪಾರಿಗಳಿಗೆ ವರುಣ ಆಘಾತ ನೀಡಿದ್ದಾನೆ. ಈ ಬಾರಿ ವಹಿವಾಟು ಅರ್ಧಕ್ಕರ್ಧ ಕುಸಿತ ಕಂಡಿದೆ.

ಸ್ಥಳಿಯ ಮೈದಾನಗಳಲ್ಲಿ ಪಟಾಕಿ ಮಳಿಗೆಗಳಿಗೆ ಸ್ಥಳಿಯಾಡಳಿತಗಳು ಅನುಮತಿ ನೀಡಿದ್ದು, ಒಂದೇ ಭಾಗದಲ್ಲಿ ಹತ್ತಾರು ಮಳಿಗೆಗಳಿದ್ದರೂ ಪಟಾಕಿ ಖರೀದಿಸುವವರ ಆಸಕ್ತಿಯೂ ಕುಂದಿತ್ತು. ಭಾರೀ ಮಿಂಚು, ಗುಡುಗು ಸಹಿತ ಮಳೆ ಸುರಿಯುತ್ತಿರುವುದರಿಂದ ವ್ಯಾಪಾರ ವಹಿವಾಟಿಗೂ ಕುತ್ತು ಎದುರಾಗಿತ್ತು. ಮನೆಗಳಲ್ಲಿ ರಾತ್ರಿ ವೇಳೆ ಅಂಗಳದಲ್ಲಿ ಪಟಾಕಿ ಸಿಡಿಸುವಂತೆಯೂ ಇಲ್ಲ. ದೀಪ ಹಚ್ಚಿಡುವಂತೆಯೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಸರಿನಲ್ಲೇ ಪಟಾಕಿ ವ್ಯಾಪಾರ

ನಗರದ ಬೀಡಿನಗುಡ್ಡೆಯಲ್ಲಿದ್ದ ಮೈದಾನದಲ್ಲಿ ಉಡುಪಿ ನಗರಸಭೆ 30ಕ್ಕೂ ಹೆಚ್ಚು ಮಳಿಗೆಗಳಿಗೆ ಅನುಮತಿ ನೀಡಿತ್ತು. ವಿಪರೀತವಾಗಿ ಸುರಿದ ಮಳೆಯಿಂದಾಗಿ ಮೈದಾನವು ಕೆಸರುಗದ್ದೆಯಾಗಿ ಮಾರ್ಪಡಾಗಿತ್ತು. ಹೀಗಾಗಿ ಮೈದಾನಕ್ಕೆ ಬಂದು ಪಟಾಕಿ ಖರೀದಿಸಲು ಅನೇಕ ಮಂದಿ ಹಿಂದೇಟು ಹಾಕಿದ್ದಾರೆ. ವ್ಯಾಪಾರಿಗಳು " ಹೋಮ್​ ಡೆಲಿವರಿ" ವ್ಯವಸ್ಥೆಯನ್ನು ಆರಂಭಿಸಿದ್ದರೂ ಸಾರ್ವಜನಿಕರಿಂದ ಹೆಚ್ಚಿನ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಅಂಗಡಿಗಳ ಸಂಖ್ಯೆ ಏರಿಕೆ

ಕಳೆದ ಬಾರಿ 18 ರಷ್ಟಿದ್ದ ಪಟಾಕಿ ಅಂಗಡಿ ಈ ಬಾರಿ 30ಕ್ಕೆ ಏರಿಕೆಯಾಗಿದೆ. ಬೆಳಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ವ್ಯಾಪಾರಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಜನರು ಅಂಗಡಿಗೆ ಬಂದು ಪಟಾಕಿ ಖರೀದಿಸಲು ಈ ಬಾರಿ ವರುಣ ಬಿಡುವು ನೀಡಲೇ ಇಲ್ಲ. ಮಳೆಯಲ್ಲಿ ಪಟಾಕಿ ಸಿಡಿಸಲು ಸಾಧ್ಯವಿಲ್ಲ ಎಂದು ಖರೀದಿದಾರರು ಹಿಂದೇಟು ಹಾಕಿದ್ದಾರೆ. ಇದರೊಂದಿಗೆ ಭಾರೀ ಗಾಳಿ ಮಳೆಯಿಂದ ಅನೇಕ ಬಾಕ್ಸ್​ಗಳು ಠುಸ್​ ಪಟಾಕಿಗಳಾಗಿದ್ದು, ಇದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ.

ತುಳಸಿ ಪೂಜೆಯ ಭರವಸೆ

ನ.1 ರಿಂದ 3 ರವರೆಗೆ ತುಳಸಿ ಪೂಜೆ ನಡೆಯಲಿದ್ದು, ಈ ದಿನದಂದೂ ಪಟಾಕಿ ಅಂಗಡಿಗೆ ಅನುಮತಿ ನೀಡಲಾಗಿದೆ. ವರುಣನ ಕೃಪೆಯಿಂದಾಗಿ ಮಳೆ ಬಾರದೇ ಇದ್ದರೇ ದೀಪಾವಳಿಯಲ್ಲಿ ಆದ ನಷ್ಟವನ್ನು ಸರಿದೂಗಿಸಿಕೊಳ್ಳಬಹುದು ಎಂಬ ಆಸೆಯಲ್ಲಿ ವ್ಯಾಪಾರಸ್ಥರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net