ಗೋವಿನಜೋಳದ ತೆನೆ ಬೆಂಕಿಗಾಹುತಿ

2 HNL 1A
Published on

ಹಾನಗಲ್ಲ/ ಬಂಕಾಪುರ: ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಹಾನಗಲ್ಲ ತಾಲೂಕಿನ ಮಾವಿನತೋಟ ಹಾಗೂ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಹೊರವಲಯದಲ್ಲಿ ಸಂಗ್ರಹಿಸಲಾಗಿದ್ದ ಗೋವಿನಜೋಳದ ತೆನೆಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ಹಾನಿಯಾದ ಪ್ರತ್ಯೇಕ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಹಾನಗಲ್ಲ ತಾಲೂಕಿನ ನಿಸ್ಸೀಮ ಆಲದಕಟ್ಟಿ ಸಮೀಪದ ಬೆಳವತ್ತಿ ಗ್ರಾಮದ ಮಾವಿನತೋಟದಲ್ಲಿ ಸಂಗ್ರಹಿಸಿಟ್ಟಿದ್ದ 5 ಎಕರೆಯಲ್ಲಿ ಬೆಳೆಯಲಾಗಿದ್ದ ಗೋವಿನಜೋಳದ ತೆನೆಗಳು ಬೆಂಕಿಗಾಹುತಿಯಾಗಿವೆ. ಗುರುಸಿದ್ದಪ್ಪ ಬಸಪ್ಪ ಬಂಕಾಪುರ ಹಾಗೂ ಸಹೋದರ ಸಂಬಂಧಿ ಜಗದೀಶ ಮಲ್ಲಪ್ಪ ಬಂಕಾಪುರ ಎಂಬುವರ ಫಸಲು ಸುಟ್ಟು ಕರಕಲಾಗಿದೆ. ಸ್ವಂತ 3 ಎಕರೆ ಹೊಲದಲ್ಲಿ ಹಾಗೂ ಅರಳೇಶ್ವರ ಗ್ರಾಮದ ಬೇರೊಬ್ಬರ 2 ಎಕರೆ ಜಮೀನಿನಲ್ಲಿ ಗೇಣಿ ಪಡೆದು ಬೆಳೆಯಲಾಗಿದ್ದ ಗೋವಿನಜೋಳ ಹಾನಿಗೊಳಗಾಗಿದೆ. ಮಾವಿನತೋಟದಲ್ಲಿನ ಸುಮಾರು ನೂರಕ್ಕೂ ಅಧಿಕ ಹೂ ಬಿಟ್ಟಿದ್ದ ಗಿಡಗಳು ಬೆಂಕಿಯ ಧಗೆಯಿಂದ ಬಾಡಿಹೋಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಬಂಕಾಪುರ ಸಮೀಪದ ಹೋತನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಗ್ರಾಮದ ಮಂಜಪ್ಪ ವರ್ಣೆಕರ ಅವರಿಗೆ ಸೇರಿದ ಸುಮಾರು 15 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ರಾಶಿ ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ವರ್ಷ ಅತಿವೃಷ್ಟಿಯಿಂದ ಅಲ್ಪ ಸ್ವಲ್ಪ ಬೆಳೆದಿದ್ದ ಮೆಕ್ಕೆಜೋಳ ಬೆಳೆಯೂ ಆಕಸ್ಮಿಕ ಬೆಂಕಿ ಘಟನೆಯಲ್ಲಿ ಹಾಳಾಗಿದೆ. ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕೇಂದು ತಾಲೂಕು ಅನ್ನದಾತ ರೈತ ಹೋರಾಟ ಸಮಿತಿ ಅಧ್ಯಕ್ಷ ಗಂಗಾಧರ ಗಡ್ಡೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net