

ಚಿಕ್ಕಮಗಳೂರು: ನಗರದಲ್ಲೆಲ್ಲ ಸ್ಯಾನಿಟೈಸ್ ಮಾಡಿದ ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದರೂ ಅವರ ಕಚೇರಿ ಸೀಲ್ಡೌನ್ ಮಾಡಿಲ್ಲ, ಸ್ಯಾನಿಟೈಸ್ ಕೂಡ ಇಲ್ಲದಂತಹ ಪರಿಸ್ಥಿತಿ ಬಂದೊದಗಿದೆ.
ಜು.11ರಂದು ಅಗ್ನಿಶಾಮಕ ಸಿಬ್ಬಂದಿ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿತ್ತು. ಜು.21ರಂದು ಅದರ ಫಲಿತಾಂಶದ ವರದಿ ಬಂದಿದ್ದು, ಠಾಣೆಯ ವಾಹನ ಚಾಲಕನಿಗೆ ಸೋಂಕು ದೃಢಪಟ್ಟಿತು. ಸೋಂಕಿತನನ್ನು ಕರೆದೊಯ್ಯಲು ಆರೋಗ್ಯ ಇಲಾಖೆ ಆಂಬುಲೆನ್ಸ್ ಬಾರದ ಕಾರಣ ಅಗ್ನಿಶಾಮಕ ದಳದ ವಾಹನದಲ್ಲೇ ಕರೆದೊಯ್ದು ಕರೊನಾ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆರೋಗ್ಯ ಇಲಾಖೆ, ಇನ್ನಿತರ ಅಧಿಕಾರಿಗಳು ಕೂಡಲೆ ಆಗಮಿಸಿ ಅಗ್ನಿಶಾಮಕ ಠಾಣೆ ಸೀಲ್ಡೌನ್ ಮಾಡಿ, ಕಚೇರಿಯನ್ನು ಸ್ಯಾನಿಟೈಸ್ ಮಾಡಬೇಕಿತ್ತು. ಸೀಲ್ಡೌನ್, ಸ್ಯಾನಿಟೈಸ್ ಮಾಡುವಂತೆ ಹಲವು ಇಲಾಖೆ, ಸ್ಥಳೀಯ ಸಂಸ್ಥೆ ಸಿಬ್ಬಂದಿಯನ್ನು ಸಂರ್ಪಸಿದರೂ ಯಾರೊಬ್ಬರೂ ಸ್ಪಂದಿಸಿಲ್ಲ.
ಲಾಕ್ಡೌನ್ ಆರಂಭವಾದಾಗಿನಿಂದ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ಸ್ವಂತ ಕರ್ಚಿನಲ್ಲಿ ಸಾವಿರಕ್ಕೂ ಅಧಿಕ ಬಟ್ಟೆ ಮಾಸ್ಕ್ಗಳನ್ನು ತಯಾರಿಸಿ ನಾಗರಿಕರಿಗೆ ಹಂಚಿದ್ದರು. ವಾಹನಗಳಿಗೆ ನಗರಸಭೆ ನೀಡಿದ ಔಷಧ ತುಂಬಿಸಿಕೊಂಡು ಎಂ.ಜಿ.ರಸ್ತೆ, ಐ.ಜಿ.ರಸ್ತೆ, ಮಾರ್ಕೆಟ್ ರಸ್ತೆ ಸೇರಿ ನಗರದ ವಿವಿಧ ಸ್ಥಳಗಳಲ್ಲಿ ನಿರಂತರವಾಗಿ ಸ್ಯಾನಿಟೈಸ್ ಮಾಡಿದ್ದರು. ಈಗ ಸೋಂಕು ತಗುಲಿದ ಸಿಬ್ಬಂದಿಯೇ ಈ ಹಿಂದೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹಲವು ಬಾರಿ ಔಷಧ ಸಿಂಪಡಿಸಿದ್ದರು. ಹೀಗೆ ಊರೆಲ್ಲ ಸ್ವಚ್ಛಗೊಳಿಸಿದ ನಂತರ ಕಚೇರಿ ಸಿಬ್ಬಂದಿಗೆ ಸೋಂಕು ತಗುಲಿದಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಯಾರೂ ಆಗಮಿಸಿಲ್ಲ. ಠಾಣೆ ಸಿಬ್ಬಂದಿ ಆರೋಗ್ಯ ತಪಾಸಣೆಗೂ ಯಾರೂ ಬರಲಿಲ್ಲ. ಅಗ್ನಿಶಾಮಕ ಠಾಣೆ ಅಕ್ಕಪಕ್ಕ ಮನೆಗಳಿದ್ದು, ಅವರೂ ಆತಂಕಕ್ಕೆ ಒಳಗಾಗಿದ್ದಾರೆ.
ಠಾಣೆಯಲ್ಲೇ ವಾಸ್ತವ್ಯ: ಅಗ್ನಿಶಾಮಕ ದಳದ ಸಿಬ್ಬಂದಿಯಲ್ಲಿ ಬಹುತೇಕರು ವಿವಾಹಿತರಾಗಿದ್ದು 1ರಿಂದ 10 ವರ್ಷದೊಳಗಿನ ಮಕ್ಕಳು ಜತೆಗಿದ್ದಾರೆ. ಸೋಂಕಿನ ಭೀತಿಯಿಂದ ಕೆಲವರು ಮನೆಗಳಿಗೆ ಹೋಗದೆ ಹೊರಗಿನಿಂದ ಆಹಾರ ತಂದು ಠಾಣೆಯಲ್ಲಿ ಊಟೋಪಚಾರ ಮಾಡಿಕೊಳ್ಳುತ್ತ ವಾಸ್ತವ್ಯ ಹೂಡಿದ್ದಾರೆ ಎಂದು ತಿಳಿದುಬಂದಿದೆ.