

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಇಂಡಿಯನ್ ಆಯಿಲ್ ಸ್ಕೈಟ್ಯಾಂಕಿಂಗ್ ಕಂಪನಿ ಅನಿಲ ಸಂಗ್ರಹಾಗಾರದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅಗ್ನಿ ಅವಘಡ ಸಂಬಂಧ ಪರಿಸ್ಥಿತಿ ತಹಬಂದಿಗೆ ತರುವ ಕುರಿತು ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಇದು ನೈಜ ಘಟನೆಯಲ್ಲ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎನ್.ಶಿವಶಂಕರ್ ಮಾರ್ಗದರ್ಶನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಈ ಅಣಕು ಪ್ರದರ್ಶನದಿಂದ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಇಂಥ ಅಣಕು ಪ್ರದರ್ಶನ ಪ್ರತಿ 6 ತಿಂಗಳಿಗೊಮ್ಮೆ ಎಲ್ಲ ಕಾರ್ಖಾನೆ ಮತ್ತು ಎಲ್ಪಿಜಿ ಪ್ಲಾಂಟ್‌ಗಳಲ್ಲಿ ನಡೆಯುತ್ತಿರುತ್ತದೆ, ಅಗ್ನಿ ಅವಘಡ ಸಂದರ್ಭದಲ್ಲಿ ತುರ್ತು ಸ್ಪಂದನ ಕಾರ್ಯದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಅಣುಕು ಪ್ರದರ್ಶನದ ನಡೆಸಿರುವುದು ಈ ವೇಳೆ ಒಂದು ಭಾಗವಷ್ಟೇ ಆಗಿದೆ ಎಂದು ತಿಳಿಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಿಲ್ಲಾ ವಿಪತ್ತು ಪರಿಣಿತ ಎ.ಬಸವರಾಜು ಮಾತನಾಡಿ, ನಿಜವಾಗಿ ನಡೆಯುವ ನೈಜ ಘಟನೆಯಂತೆಯೇ ಸಂದರ್ಭವನ್ನು ಮರು ಸೃಷ್ಟಿಸಲಾಗುತ್ತದೆ. ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಜನರು ಅವಘಡಗಳು ಸಂಭವಿಸಬಹುದಾದ ಸಂದರ್ಭದಲ್ಲಿ ಸುರಕ್ಷಿತ ಕ್ರಮಗಳನ್ನು ಪಾಲಿಸಿ ಸೂಕ್ತ ರಕ್ಷಣೆ ಪಡೆದುಕೊಳ್ಳುವ ಉದ್ದೇಶದಿಂದ ಜನರಿಗೆ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ನಡೆದದ್ದು ಹೇಗೆ? ಇಂಡಿಯನ್ ಆಯಿಲ್ ಸ್ಕೈಟ್ಯಾಂಕಿಂಗ್ ಕಂಪನಿ ಅನಿಲ ಸಂಗ್ರಹಾಗಾರದಲ್ಲಿ ಪೈಪ್‌ಲೈನ್ ಮೂಲಕ ಅನಿಲ ವರ್ಗಾವಣೆ ಸಂದರ್ಭದಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಹೊಗೆಯಿಂದ ತುಂಬಿಹೋಯಿತು. ತಕ್ಷಣ ಸಂಬಂಧಿಸಿದ ಕಾರ್ಮಿಕರು ಸಂವಹನ ಕೇಂದ್ರಕ್ಕೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದರು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ವೈದ್ಯಾಧಿಕಾರಿಗಳು, ಅನಿಲ ಸೋರಿಕೆ ತಪಾಸಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬರುವಂತೆ ತಿಳಿಸಿದರು. ಎಲ್ಲ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ವಾಹನ ಮತ್ತು ಜನರ ಓಡಾಟ ನಿರ್ಬಂಧಿಸಿ ಅಪಾಯದ ಮುನ್ನೆಚ್ಚರಿಕೆ ಕ್ರಮವಾಗಿ ಸೈರನ್ ಮೊಳಗಿಸಲಾಯಿತು. ಸುತ್ತಮುತ್ತಲಿನ ಜನರಿಗೆ ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವಿರಲಿಲ್ಲ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪೈಪುಗಳ ಮೂಲಕ ರಭಸವಾಗಿ ನೀರನ್ನು ಹರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಯಾವುದೇ ಅವಘಡಗಳು ಸಂಭವಿಸದಂತೆ ಸನ್ನಿವೇಶವನ್ನು ತಹಬಂದಿಗೆ ತಂದರು. ಈ ಅವಘಡದಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ವೈದ್ಯಕೀಯ ಸಿಬ್ಬಂದಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ಸಲಹೆ ಸೂಚನೆ: ಕಾರ್ಖಾನೆಗಳ ಮತ್ತು ಬಾಯ್ಲರ್‌ಗಳ ಇಲಾಖೆಯ ಜಂಟಿ ನಿರ್ದೇಶಕ ನವನೀತ್ ಮೋಹನ್, ಉಪ ನಿರ್ದೇಶಕ ಸೋಮಶೇಖರ್ ಅಣಕು ಪ್ರದರ್ಶನ ವೀಕ್ಷಕರಾಗಿ ಭಾಗವಹಿಸಿ, ಅಣಕು ಪ್ರದರ್ಶನ ನಡೆಸುವ ಬಗ್ಗೆ ಹಾಗೂ ಸಿಬ್ಬಂದಿ ಸುರಕ್ಷತೆ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ದೇವನಹಳ್ಳಿ ಆಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಮುಖ್ಯಸ್ಥ ನಾಗೇಶ್, ಕಾರ್ಯಾಚರಣೆ ಪ್ರಧಾನ ವ್ಯವಸ್ಥಾಪಕ ಹರಿರಾಮ್, ಸುರಕ್ಷತೆ, ಭದ್ರತೆ ಮತ್ತು ಪರಿಹಾರ ವಿಭಾಗದ ಹಿರಿಯ ಅಧಿಕಾರಿ ಶ್ರೀನಿವಾಸ್, ಇಂಡಿಯನ್ ಆಯಿಲ್ ಟ್ಯಾಂಕಿಂಗ್ ಸಿಇಒ ಟಿ.ಎಸ್. ದುಪಾರೆ ಮೇಲ್ವಿಚಾರಣೆಯಲ್ಲಿ ಅಣಕು ಪ್ರದರ್ಶನ ಯಶಸ್ವಿಯಾಗಿ ನಡೆಸಲಾಯಿತು.