ಜಿಮ್ಸ್ ಹಾಸ್ಟೆಲ್‌ನ ಕೆಳಮಹಡಿಯಲ್ಲಿ ಬೆಂಕಿ

16 GDG-FIRE
Published on

ಗದಗ: ಇಲ್ಲಿನ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆವರಣದಲ್ಲಿರುವ ಎಂಬಿಬಿಎಸ್ ವಿದ್ಯಾರ್ಥಿಗಳ ಹಾಸ್ಟೆಲ್‌ನ ಕೆಳಮಹಡಿಯಲ್ಲಿ ಸಂಗ್ರಹಿಸಿದ್ದ ಕಟ್ಟಿಗೆಗಳಿಗೆ ಬೆಂಕಿ ತಗುಲಿ, ಮರದ ತುಂಡುಗಳು ಹೊತ್ತಿ ಉರಿದಿವೆ. ಬೆಂಕಿಯ ಕೆನ್ನಾಲಿಗೆ ಮೊದಲ ಮಹಡಿಗೂ ವಿಸ್ತರಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಚುರುಕಿನ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಹಾಸ್ಟೆಲ್‌ನ ಪಾರ್ಕಿಂಗ್ ಪ್ರದೇಶದಲ್ಲಿರುವ ವಿದ್ಯುತ್ ಕೊಠಡಿ ಪಕ್ಕದಲ್ಲಿ ಕಟ್ಟಿಗೆ ತುಂಡುಗಳನ್ನು ಜೋಡಿಸಿಡಲಾಗಿತ್ತು. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಿಗೆಗಳು ಒಣಗಿದ್ದರಿಂದ ಬೆಂಕಿ ಬೇಗ ಹರಡಿಕೊಂಡಿದೆ. ಮೊದಲ ಮಹಡಿಗೂ ಬೆಂಕಿಯ ಕಾವು ಆವರಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿ.ಎಸ್. ಟಕ್ಕೇಕರ್ ಅವರ ಮಾರ್ಗದರ್ಶನದಲ್ಲಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಘಟನೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲ ಎಂದು ಅಗ್ನಿಶಾಮಕ ಠಾಣೆಯ ಹವಾಲ್ದಾರ್ ಮುತ್ತಪ್ಪ ತಿಳಿಸಿದ್ದಾರೆ. ಅಗ್ನಿಶಾಮಕ ಠಾಣೆಯ ಸಿಬ್ಬಂದಿಯಾದ ಎಂ.ಐ. ದೊಡ್ಡಮನಿ, ನಜೀರ್ ಅಹ್ಮದ್ ಜಮಖಂಡಿ, ಕೆ.ಎಂ. ಹುಯಿಲಗೋಳ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net