

ಚಿಕ್ಕಮಗಳೂರು: ನಗರದ ಜಯನಗರ ಮೊದಲ ಅಡ್ಡರಸ್ತೆಯಲ್ಲಿ ರೂಪಾ ಎಂಬುವವರು ಬಾಡಿಗೆಗೆ ಇರುವ ಹೆಂಚಿನ ಮನೆಗೆ ಶುಕ್ರವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಬಿದ್ದಿದ್ದು, ಸುಮಾರು 4 ಲಕ್ಷ ರೂ. ನಷ್ಟವಾಗಿದೆ. ರೂಪಾ ಅವರು ನಗರದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು, ಮನೆಗೆ ಬೀಗ ಹಾಕಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿದ್ದ ದಿನಸಿ, ಬಟ್ಟೆ, ಪೀಠೋಪಕರಣಗಳು, ಪಾತ್ರೆ, ಪದಾರ್ಥಗಳು ನಾಶವಾಗಿವೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಎರಡು ವಾಹನಗಳಲ್ಲಿ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದು, ಅಕ್ಕಪಕ್ಕದ ಮನೆಗಳಿಗೆ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದರು. ಘಟನೆಯಲ್ಲಿ ಬೆಂಕಿಗೆ ಆಹುತಿಯಾದ ಮನೆಯ ಒಂದು ಪಾರ್ಶ್ವದಲ್ಲಿರುವ ಮಾಲೀಕರ ಮನೆಯ ಗೋಡೆಗೆ ಹಾನಿಯಾಗಿದ್ದರೆ, ಇನ್ನೊಂದು ಪಾರ್ಶ್ವದಲ್ಲಿರುವ ಇನ್ನೊಂದು ಬಾಡಿಗೆ ಮನೆಯ ಛಾವಣಿಗೆ ಹಾನಿಯಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಶಶಿಧರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.