

ಮಂಡ್ಯ: ತಾಲೂಕಿನ ಕನ್ನಲಿ ಗ್ರಾಮದಲ್ಲಿ ದುಬಾರಿ ವೆಚ್ಚದಲ್ಲಿ ನವೀಕರಣಗೊಳಿಸಿದ್ದ ಮನೆಯೊಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಚಾವಣಿ ಸಮೇತ ಬೆಂಕಿಗೆಗಾಹುತಿಯಾಗಿದೆ.
ಗ್ರಾಮದ ಜ್ಯೋತಿ ಲಕ್ಷ್ಮೀ ಅವರು ಕಳೆದ ಮೂರು ತಿಂಗಳಲ್ಲಿ ಮಂಗಳೂರು ಹೆಂಚಿನ ಮನೆಯನ್ನು ನವೀಕರಣಗೊಳಿಸಿದ್ದರು. ಕುಟುಂಬದವರು ಬೆಂಗಳೂರಿನಲ್ಲಿ ವಾಸವಿದ್ದರು. ಗ್ರಾಮದ ಮನೆಯಲ್ಲಿ ಗೃಹೋಪಯೋಗಿ ವಸ್ತುಗಳಾದ ಫ್ರಿಜ್, ಫ್ಯಾನ್, ಟಿವಿ, ಬೀರು, ಸೇರಿದಂತೆ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.
ಸೋಮವಾರ ತಡರಾತ್ರಿ ಮನೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಪಕ್ಕದ ಮನೆಯ ನಾಯಿ ರಾತ್ರಿ ಒಂದು ಗಂಟೆಯಲ್ಲಿ ಬೊಗಳಲು ಆರಂಭಿಸಿದಾಗ, ಹೊರಗೆ ಬಂದು ನೋಡಿದಾಗ ಮನೆಯು ಹೊತ್ತಿ ಉರಿಯುತ್ತಿರುವುದು ಜನರಿಗೆ ಕಂಡಿದೆ. ತಕ್ಷಣ ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಬರುವಷ್ಟರಲ್ಲಿ ಮನೆಯ ಚಾವಣಿ ಸಮೇತ ಸುಟ್ಟಹೋಗಿತ್ತು. ನಂತರ ವಿಷಯ ತಿಳಿದು ಬೆಂಗಳೂರಿನಿಂದ ಬಂದ ಜ್ಯೋತಿಲಕ್ಷ್ಮೀ ಅವರು ತನ್ನ ಮನೆಯ ದೃಶ್ಯ ನೋಡಿ ಕಣ್ಣೀರು ಹಾಕಿದರು.