

ಪುತ್ತೂರು ಗ್ರಾಮಾಂತರ: ಪುತ್ತೂರು ಗ್ರಾಮಾಂತರ ವ್ಯಾಪ್ತಿಯ ದೊಡ್ಡಡ್ಕ ಎಂಬಲ್ಲಿರುವ ಅಂಗಡಿಯೊಂದು ಗುರುವಾರ ತಡರಾತ್ರಿ ಬೆಂಕಿಗಹಾಹುತಿಯಾಗಿದ್ದು, ದುಷ್ಕರ್ಮಿಗಳು ಬೆಂಕಿ ಹಚ್ಚಿದ ಶಂಕೆ ವ್ಯಕ್ತವಾಗಿದೆ.
ದೊಡ್ಡಡ್ಕ ನಿವಾಸಿ ಸಂಕಪ್ಪ ಪೂಜಾರಿ ಎಂಬುರಿಗೆ ಸೇರಿದ ಗೂಡಂಗಡಿ ಬೆಂಕಿಗಾಹುತಿಯಾಗಿದೆ. ಕೆಲ ವರ್ಷಗಳಿಂದ ಸುಬ್ರಹ್ಮಣ್ಯ-ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ದೊಡ್ಡಡ್ಕದಲ್ಲಿ ಗೂಡಂಗಡಿ ಹಾಗೂ ಸಣ್ಣ ಕ್ಯಾಂಟೀನನ್ನು ಜತೆಯಾಗಿ ನಡೆಸುತ್ತಿದ್ದರು. ಎಂದಿನಂತೆ ಗುರುವಾರ ಸಂಜೆ 5ಗಂಟೆಗೆ ಅಂಗಡಿ ಬಂದ್ ಮಾಡಿ ಹೋಗಿದ್ದರು. ರಾತ್ರಿ 2 ಗಂಟೆ ವೇಳೆಗೆ ಗೂಡಂಗಡಿ ಹಾಗೂ ಕ್ಯಾಂಟೀನ್ ಸುಟ್ಟು ಹೋಗಿದ್ದು ಅಪಾರ ನಷ್ಟ ಉಂಟಾಗಿದೆ. ಗೂಡಂಗಡಿಗೆ ವಿದ್ಯುತ್ ಸಂಪರ್ಕವಿಲ್ಲದೆ ಸೋಲಾರ್ ಮೂಲಕ ಅಂಗಡಿ ನಡೆಸುತ್ತಿದ್ದರು. ಸಂಕಪ್ಪ ಪೂಜಾರಿ ನೀಡಿರುವ ದೂರು ದಾಖಲಿಸಿಕೊಂಡಿರುವ ಸಂಪ್ಯ ಠಾಣೆ ಪೊಲೀಸರು ಅಂಗಡಿ ಅಕ್ಕಪಕ್ಕದಲ್ಲಿರುವ ಸಿಸಿ ಕ್ಯಾಮರಾ ದೃಶ್ಯವಳಿಗಳ ಪರಿಶೀಲನೆ ನಡೆಸಿದ್ದು, ಅಂಗಡಿಗೆ ಬಂದು ಬೆಂಕಿ ಹೆಚ್ಚಿರುವುದು ಕಂಡು ಬಂದಿಲ್ಲ. ಬೆಂಕಿ ಹಚ್ಚಲಾಗಿದೆಯೇ ಅಥವಾ ಆಕಸ್ಮಿಕ ಘಟನೆಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಆರ್ಯಾಪು ಗ್ರಾಪಂ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ, ಬಲ್ನಾಡು ಗ್ರಾಪಂ ಸದಸ್ಯ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ.