

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ವೈಯುಕ್ತಿಕ ದ್ವೇಷದಿಂದ ದುಷ್ಕರ್ಮಿಗಳು ನಿವೃತ್ತ ಶಿಕ್ಷಕರೊಬ್ಬರ ತೋಟಕ್ಕೆ ಬೆಂಕಿ ಹಚ್ಚಿದ್ದು, ಲಕ್ಷಾಂತರ ರೂಪಾಯಿ ಬೆಳೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ತಾಲೂಕಿನ ಹೊನ್ನಸಂದ್ರ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಕೆಂಪಯ್ಯ ಅವರ ತೋಟಕ್ಕೆ ಬೆಂಕಿ ಹಚ್ಚಿದ್ದು,ತೋಟದಲ್ಲಿದ್ದ ಸುಮಾರು 900 ಅಡಿಕೆ ಮರ, 25 ತೆಂಗಿನ ಮರ, 15 ಮಾವಿನ ಮರ, 15 ನಿಂಬೆಮರ, 15 ಎಳ್ಳಿಕಾಯಿ ಮರ ಸೇರಿ 300ಕ್ಕೂ ಹೆಚ್ಚು ಬಾಳೆಗಿಡ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಸುಟ್ಟಿವೆ. ತೋಟದ ಸಮೀಪದಲ್ಲೇ ಕೆಲಸ ನಿರ್ವಹಿಸುತ್ತಿದ್ದ ಕೆಂಪಯ್ಯ ಅವರು ಬೆಂಕಿ ಹತ್ತುತ್ತಿದ್ದನ್ನು ಗಮನಿಸಿ ನಂದಿಸಲು ಮುಂದಾಗಿದ್ದಾರೆ. ಬೆಂಕಿಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಅಗ್ನಿ ಶಾಮಕ ಠಾಣೆ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿ ಎಲ್ಲ ಕಡೆ ಆವರಿಸಿತ್ತು.
ಘಟನೆಯ ಹಿನ್ನಲೆ: ಜಮೀನು ನಕಾಶೆ ವಿಚಾರವಾಗಿ ಸಹೋದರ ಸಂಬಂಧಿ ರೇಣುಕಪ್ಪ, ಪುರುಷೋತ್ತಮ ಎಂಬಾತರ ನಡುವೆ ಕಳೆದ ಆರೇಳು ತಿಂಗಳಿಂದ ಜಗಳವಾಗಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇದರ ನಡುವೆ ನನ್ನ ತೋಟಕ್ಕೆ ಬೆಂಕಿ ಹಚ್ಚಿದ್ದಾರೆ. ಮಕ್ಕಳಂತೆ ಸುಮಾರು ವರ್ಷಗಳಿಂದ ಸಾಕಿದ್ದ ಮರಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದು ಸಾಕಷ್ಟು ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಂಪಯ್ಯ ಮನವಿ ಮಾಡಿದ್ದಾರೆ.
ಅಗ್ನಿಶಾಮಕ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.