

ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಪಟ್ಟಣದ ಜಯ ಇನ್ಸ್‌ಟ್ಯೂಟ್ ರಸ್ತೆಯಲ್ಲಿರುವ ಮೀನಾಕ್ಷೀಸ್ ಟೆಕ್ಸ್‌ಟೈಲ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸರ್ಕ್ಯೂಟ್‌ನ ರಭಸಕ್ಕೆ ಅಂಗಡಿ ಮಾಲೀಕ ಪಿ.ಎಸ್.ಚೌಹಾನ್ ಶೆಲ್ಟರ್ ಸಮೇತ 3 ಮೀಟರ್ ದೂರಕ್ಕೆ ಹಾರಿ ಬಿದ್ದು ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿ ರಾತ್ರಿ 9.30 ಸಮಯದಲ್ಲಿ ಅಂಗಡಿಯ ಶೆಲ್ಟರ್ ಮುಚ್ಚುವಾಗ ಭಾರಿ ಶಬ್ದದೊಂದಿಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಕ್ಷಣ ಮಾತ್ರದಲ್ಲಿಯೇ ಅಂಗಡಿಯೊಳಗಿದ್ದ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ನಡುವೆ ಚೌಹಾನ್ ರಸ್ತೆಗೆ ಹಾರಿಬಿದ್ದ ಪರಿಣಾಮ ಪ್ರಜ್ಞೆ ಕಳೆದುಕೊಂಡರು. ತಕ್ಷಣ ಸಾರ್ವಜನಿಕರು ಗಾಯಾಳುವನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಅಂಗಡಿಯೊಳಗೆ ಹೊತ್ತಿ ಹುರಿಯುತ್ತಿದ್ದ ಬೆಂಕಿಯ ಕೆನ್ನಾಲಿಗೆಯನ್ನು ನಂದಿಸುವ ಮೂಲಕ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದಾರೆ.
ಬೆಂಕಿ ಅವಘಡ ಕುರಿತು ಭಾನುವಾರ ಪೊಲೀಸರು ಚೌಹಾನ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಹೇಳಿಕೆ ಪಡೆದಿದ್ದಾರೆ. ಅಲ್ಲದೆ ಅವಘಡದಿಂದ ಲಕ್ಷಾಂತರ ರೂ. ಬಾಳುವ ಸೂಟಿಂಗ್ಸ್, ಶರ್ಟಿಂಗ್ಸ್, ಸೀರೆಗಳು ಮತ್ತು ಡ್ರೆಸ್ ಮೇಟಿರಿಯಲ್, ಕಿಡ್ಸ್ ರೆಡಿಮೆಡ್ಸ್, ಹೊಸೈರಿಗಳು, ಹ್ಯಾಂಡ್‌ಲೂಂ ಹಾಗೂ ವಿವಿಧ ರೀತಿಯ ಜವಳಿ ಬಟ್ಟೆಗಳು ಬೆಂಕಿಗಾಹುತಿಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಟೆಕ್ಸ್‌ಟೈಲ್ ಬೆಂಕಿಗಾಹುತಿಯಾದ ಸುದ್ದಿ ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ನೂರಾರು ಜನರು ಹಾಗೂ ವರ್ತಕರು ಕುತೂಹಲದಿಂದ ಅಂಗಡಿ ಮುಂದೆ ಜಮಾಯಿಸಿದ್ದರು. ಅವಘಡದ ತೀವ್ರತೆಯನ್ನು ವೀಕ್ಷಿಸಿ ಮರುಗಿದರು. ಅದೃಷ್ಟವಷಾತ್ ಅಂಗಡಿ ಮಾಲೀಕ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ಸಮಾಧಾನ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು.