ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಬೆಂಕಿ

FIRE
Published on

ಮುಂಡರಗಿ: ತಾಲೂಕಿನ ಡೋಣಿ, ಡೋಣಿ ತಾಂಡಾ ಭಾಗದಲ್ಲಿ ಆಯುರ್ವೇದ ಸಸ್ಯಕಾಶಿ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡು ಸಸ್ಯ ಸಂಪತ್ತು ನಾಶವಾಗಿದೆ.

ಸುಮಾರು 60 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿದೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಇಲಾಖೆ ಸಿಬ್ಬಂದಿ ಸಾಹಸಪಟ್ಟು ಬೆಂಕಿ ನಂದಿಸಿದರು ಬುಧವಾರ ಎ.ಸಿ.ಎಫ್. ಮಹಾಂತೇಶ ಪೊಲೀಸ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.

ವನ್ಯಜೀವಿಧಾಮ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಬೆಂಕಿ ಬೀಳುವುದರಿಂದ ಒಂದೆಡೆ ಆಯುರ್ವೇದ ಸಸ್ಯ ಸಂಪತ್ತಿಗೆ ಹಾನಿಯಾದರೆ, ಮತ್ತೊಂದೆಡೆ ಪ್ರಾಣಿ, ಸರಿಸೃಪಗಳು, ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಈ ಬಗ್ಗೆ ಅರಣ್ಯ ಇಲಾಖೆ ಹೆಚ್ಚಿನ ಮುಂಜಾಗ್ರತೆ ಕ್ರಮ ವಹಿಸುವುದು ಅವಶ್ಯವಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಈ ಕುರಿತು ಪ್ರತಿಕ್ರಿಯಿಸಿದ ಕಪ್ಪತಗುಡ್ಡ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ, ಡೋಣಿ, ಡೋಣಿ ಭಾಗದ ಕಪ್ಪತಗುಡ್ಡ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿತ್ತು, 65 ಸಿಬ್ಬಂದಿ ಸೇರಿ ಬೆಂಕಿ ನಂದಿಸಿದ್ದೇವೆ. ಬೆಂಕಿ ಹೇಗೆ ಹೊತ್ತಿಕೊಂಡಿದೆ ಎನ್ನುವ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ಮಧ್ಯಾಹ್ನ ಸಮಯಕ್ಕೆ ಅದೇ ಭಾಗಕ್ಕೆ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಹೋಗಿದ್ದು ಮಾಹಿತಿ ಸಿಕ್ಕಿದೆ. ಆ ಭಾಗದಲ್ಲಿನ ಸಿಸಿ ಕ್ಯಾಮರಾ ಸಹ ಪರಿಶೀಲನೆ ಮಾಡಲಾಗುತ್ತಿದೆ. ಸೂಕ್ತ ತನಿಖೆ ನಡೆಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net