

ಮಳವಳ್ಳಿ : ತಾಲೂಕಿನ ಉಪ್ಪನಹಳ್ಳಿ (ಕನ್ನಹಳ್ಳಿ) ಸಮೀಪದ ಮೈಸೂರು ಮುಖ್ಯರಸ್ತೆಯಲ್ಲಿ ಭಾನುವಾರ ತಡರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಂಪೂರ್ಣವಾಗಿ ಕಾರು ಸುಟ್ಟು ಕರಕಲಾಗಿದೆ.
ಮೈಸೂರಿನ ಬ್ಯಾಂಕ್ ಉದ್ಯೋಗಿ ವಿಮಲ್ ಅವರ ಕಾರು ಬೆಂಕಿಗೆ ಆಹುತಿಯಾಗಿದ್ದು, ಇವರು ಕಾರ್ಯನಿಮಿತ್ತ ಮಳವಳ್ಳಿ ಪಟ್ಟಣಕ್ಕೆ ತಮ್ಮ ಕಾರಿನಲ್ಲಿ ಆಗಮಿಸಿದ್ದರು. ತಡರಾತ್ರಿ ಒಬ್ಬರೇ ಹಿಂದಿರುಗಿ ಮೈಸೂರಿಗೆ ತೆರಳುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಾರಿನಲ್ಲಿ ಹೊಗೆ ತುಂಬಿಕೊಂಡಿದೆ. ಗಾಬರಿಗೊಂಡ ಚಾಲನೆ ಮಾಡುತ್ತಿದ್ದ ವಿಮಲ್ ಅವರು ತಕ್ಷಣ ಕಾರಿನಿಂದ ಇಳಿದು ಹೊರಬಂದಿದ್ದಾರೆ. ಕ್ಷಣಾರ್ಧದಲ್ಲಿ ಇಡೀ ಕಾರನ್ನು ಬೆಂಕಿ ಆವರಿಸಿ ಹೊತ್ತಿ ಉರಿಯಲಾರಂಬಿಸಿದೆ. ಕೂಡಲೇ ಗಾಬರಿಯಿಂದ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರಾದರೂ ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.
ತಡರಾತ್ರಿಯಾಗಿದ್ದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲೆ ಸುಟ್ಟು ಕರಕಲಾಗಿ ಕಾರನ್ನು ಅಗ್ನಿ ಶಾಮಕದಳದ ಸಿಬ್ಬಂದಿ ರಸ್ತೆ ಬದಿಗೆ ಸರಿಸುವುದರ ಜತೆಗೆ ಆತಂಕಗೊಂಡಿದ್ದ ಕಾರು ಮಾಲೀಕನನ್ನು ಸಮಾಧಾನಪಡಿಸಿ ಬೇರೊಂದು ವಾಹನದಲ್ಲಿ ಮೈಸೂರಿಗೆ ಕಳುಹಿಸಿದರು. ಸೋಮವಾರ ಕಿರುಗಾವಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.