

ಹಿರೀಸಾವೆ: ಬೆಂಕಿ ರಹಿತವಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳ ಸೇವನೆಯು ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕಾರ್ತಿಕ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಅನಂತ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಕಾರ್ತಿಕ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೆಂಕಿ ರಹಿತ ಆಹಾರಗಳ ತಯಾರಿಕಾ ಸ್ಪರ್ಧೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ರಾಮಾಯಣ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನ ಕಲಿಸುವುದು ಅಗತ್ಯವಿದೆ. ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಜ್ಞಾನ ಹಾಗೂ ಧ್ಯಾನ ಅಗತ್ಯವಿದ್ದು, ಮೌಲ್ಯಯುತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲ್ಪಿಸಬೇಕು ಎಂದರು.
ಭವಿಷ್ಯಕ್ಕೆ ಶಿಕ್ಷಣದ ಕಲಿಕೆ ಅಗತ್ಯವಿದ್ದು, ಶೈಕ್ಷಣಿಕ ಹಂತದಲ್ಲಿ ಟಿವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರವಿರಿಸುವುದು ಪಾಲಕರ ಕರ್ತವ್ಯವಾಗಿದೆ. ಇದರಿಂದ ತಮ್ಮ ಮಕ್ಕಳನ್ನು ಸಮಾಜದ ಆಸ್ತಿಯಾಗಿ ರೂಪಿಸಬಹುದು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ರಾಮಾಯಣದ ದೃಶಾವಳಿಗಳನ್ನು ಹಂತ ಹಂತವಾಗಿ ಪ್ರದರ್ಶನ ಮಾಡಿದ ಪರಿ ನೋಡುಗರ ಗಮನ ಸೆಳೆಯಿತು. ಶಿಕ್ಷಕ ಎಚ್.ಎನ್.ಅಣ್ಣಯ್ಯ ಸಹ ಶಿಕ್ಷಕರ ನೆರವಿನೊಂದಿಗೆ ನಿರ್ದೇಶನ ಮಾಡಿದ್ದ ನಾಟಕದಲ್ಲಿ ಶ್ರೀರಾಮನ ಜನ್ಮ, ಸೀತಾರಾಮ ಕಲ್ಯಾಣ, ವನವಾಸ, ಅಪಹರಣ, ರಾಮ-ರಾವಣರ ಯುದ್ಧ, ಸೀತೆಯ ಅಗ್ನಿಪರೀಕ್ಷೆ, ಲವಕುಶರ ಜನನ ಹಾಗೂ ರಾಮ-ಲವ ಕುಶರ ಯುದ್ಧದ ದೃಶ್ಯಾವಳಿಗಳನ್ನು ನೋಡುಗರಿಗೆ ಅರ್ಥವಾಗುವ ಹಾಗೆ ಅಭಿನಯಿಸಿದರು.
ಬೆಂಕಿ ರಹಿತ ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಹೆಸರು ಕಾಳು, ಬೇಳೆ ಹಾಗೂ ವಿವಿಧ ಮೊಳಕೆ ಕಾಳುಗಳಿಂದ ಕೋಸಂಬರಿ, ಹಣ್ಣುಗಳು, ರಸಾಯನ ತಯಾರಿಸಿದ್ದು ಪ್ರದರ್ಶನದ ಜತೆಗೆ ಮಾರಾಟ ಮಾಡಿದರು. ಹಿರೀಸಾವೆ ನಯನಾಕುಮಾರಿ, ಪತ್ರಕರ್ತರಾದ ಹಿ.ಕೃ.ಚಂದ್ರು ಹಾಗೂ ಆರ್. ಶ್ರೀನಿವಾಸ್ ಉಳ್ಳಾವಳ್ಳಿ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದ್ದು ಸ್ಪರ್ಧೆಯಲ್ಲಿ ವಿಜೇತರಾದ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂಧಿಸಿದರು. ಕಾರ್ಯದರ್ಶಿ ರೇಣುಕಾದೇವಿ, ಮುಖ್ಯಶಿಕ್ಷಕ ಬಿ.ಸಿ.ಚೇತನ್ ಕುಮಾರ್ ಕಾರ್ಯಕ್ರಮಗಳ ಆಯೋಜನೆ ನೇತೃತ್ವ ವಹಿಸಿದ್ದರು. ಪಾಲಕರು ಪಾಲ್ಗೊಂಡಿದ್ದರು.