ಸ್ವಯಂ ರಕ್ಷಣೆ ಜತೆಗೆ ಬೆಂಕಿಯೊಂದಿಗೆ ಸೆಣಸಾಟ: ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಬಿ.ಎಂ.ರಾಘವೇಂದ್ರ ಹೇಳಿಕೆ

Fire fighters Martyrs Day Mandya
Published on

ಮಂಡ್ಯ: ಯಾವುದೇ ಮೂಲೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದಾಗ ಕ್ಷಣದಲ್ಲಿ ಧಾವಿಸುವ ನಾವುಗಳು ಸ್ವಯಂ ರಕ್ಷಣೆಯೊಂದಿಗೆ ಬೆಂಕಿಯೊಂದಿಗೆ ಸೆಣಸಾಡಿ ಜೀವ ಹಾನಿ ತಡೆಯಬೇಕಾದ ಜವಾಬ್ದಾರಿ ಇರುತ್ತದೆ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಬಿ.ಎಂ.ರಾಘವೇಂದ್ರ ಹೇಳಿದರು.

ನಗರದ ಅಗ್ನಿಶಾಮಕ ಠಾಣಾ ಆವರಣದಲ್ಲಿ ಆಯೋಜಿಸಿದ್ದ ಅಗ್ನಿಶಾಮಕ ದಳದ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಗ್ನಿ ಅನಾಹುತ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಜೀವ ಹಾಗೂ ಆಸ್ತಿ ಪಾಸ್ತಿ ಹಾನಿಯನ್ನು ಕಡಿಮೆಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲ ಕಡೆಗಳಲ್ಲಿ ಕೇವಲ ಅಗ್ನಿ ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಂಡರೆ ಸಾಲದು. ಬದಲಿಗೆ ಕಾಲಕಾಲಕ್ಕೆ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಸುಸ್ಥಿಯಲ್ಲಿಟ್ಟು ಸರ್ವ ಸನ್ನದ್ಧವಾಗಿರಿಸಬೇಕು. ಅನಾಹುತ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅವಘಡಗಳನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಮುಂಬೈನ ವಿಕ್ಟೋರಿಯಾ ಡಾಕ್ ಬಂದರಿನಲ್ಲಿ 1944 ಏ.14ರಂದು ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಎಸ್‌ಎಸ್ ಪೋರ್ಟ್ ಸ್ಪೆಕೈನ್ ಎಂಬ ಹಡಗು ಘೋರ ಅಗ್ನಿ ಅನಾಹುತಕ್ಕೆ ಒಳಗಾಯಿತು. ಬೆಂಕಿಯನ್ನು ನಂದಿಸಲು ಮುಂಬೈ ಅಗ್ನಿಶಾಮಕ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಹಡಗು ಸ್ಫೋಟಗೊಂಡು 66 ಜನ ವೀರ ಮರಣ ಹೊಂದಿದರು. ಅಂತೆಯೇ ಹಲವಾರು ಗಾಯಾಳುಗಳಾದರು. ಸತತ ಒಂದು ವಾರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಈ ಸಂಬಂಧ ಪ್ರತೀ ವರ್ಷ ಏ.14 ರಿಂದ 20 ರವರೆಗೆ ದೇಶಾದ್ಯಂತ ಅಗ್ನಿಶಾಮಕ ಸೇವಾ ಸಪ್ತಾಹ ಆಚರಿಸಿ, ವೀರ ಮರಣ ಹೊಂದಿದ ಹುತಾತ್ಮರ ನೆನಪಿಗಾಗಿ ಪ್ರತಿ ವರ್ಷ ಏ.14ರಂದು ಅಗ್ನಿಶಾಮಕ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ಮಂಡ್ಯ ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್, ಎಂ.ಸಿ.ರಾಜೇಶ್, ದೊಡ್ಡಯ್ಯ, ನಾಗಸಿದ್ದರಾಧ್ಯ ಇತರರಿದ್ದರು. ಇದೇ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಠಾಣೆಯಲ್ಲಿ ಆಚರಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಎರಡು ನಿಮಿಷ ಮೌನಾಚರಣೆ ನಡೆಸಿ ಅಗ್ನಿಶಮನ ಮತ್ತು ರಕ್ಷಣಾ ಕಾರ್ಯಚರಣೆಯ ಅವಧಿಯಲ್ಲಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ಸಲ್ಲಿಸಿ ಪ್ರಾಣಾರ್ಪಣೆ ಮಾಡಿದ ವೀರ ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಇಲಾಖೆಯಲ್ಲಿ ಅಗ್ನಿಕರೆ, ರಕ್ಷಣಾ ಕರೆ ಮತ್ತು ಠಾಣೆ, ವಾಹನ-ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಜಿಲ್ಲೆಯ 7 ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಅತ್ಯುತ್ತಮ ಸೇವಾ ಪುರಸ್ಕರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net