ಕಪ್ಪತಗುಡ್ಡಕ್ಕೆ ಅಗ್ನಿ ಆತಂಕ!

kappataguda
Published on

ಗದಗ: ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆ ಸುರಿದಿರುವುದರಿಂದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಪ್ಪತಗುಡ್ಡ ವನ್ಯಜೀವಿಧಾಮ ಪ್ರದೇಶಕ್ಕೆ ಈಗ ಬೆಂಕಿ ಬೀಳುವ ಆತಂಕ ಕಾಡತೊಡಗಿದೆ. ಬೆಂಕಿ ರೇಖೆ ಗುರುತಿಸುವ (ತೆಗ್ಗು ಕಡಿಯುವ) ಕಾಮಗಾರಿಗೆ ಸರ್ಕಾರ ಅನುದಾನ ನೀಡದೇ ಇರುವುದರಿಂದ ಅಪಾರ ಸಸ್ಯ ಸಂಪತ್ತು ಬೆಂಕಿಗೆ ತುತ್ತಾಗಬಹುದೆಂಬ ಚಿಂತೆ ಅರಣ್ಯ ಇಲಾಖೆಯಲ್ಲಿ ಮನೆಮಾಡಿದೆ.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ, ಅದರಲ್ಲೂ ಕಪ್ಪತಗುಡ್ಡದ ಸಾಲಿನಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಸಸ್ಯ ಸಂಪತ್ತು ಸಮೃದ್ಧವಾಗಿ ಬೆಳೆದು ನಿಂತಿದೆ. ಹೀಗಾಗಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡಕ್ಕೆ ಬೇಸಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಬೀಳಬಹುದು ಎಂದು ಅಂದಾಜಿಸಲಾಗಿದೆ. ಅನುದಾನ ಕೊರತೆಯಿಂದ ಗುಡ್ಡ ರಕ್ಷಣೆ ಮಾಡುವ ಸಿಬ್ಬಂದಿ ನೇಮಕವಾಗಿಲ್ಲ. ಬೆಂಕಿ ರೇಖೆ ಗುರುತಿಸುವ ಕೆಲಸವೂ ಸಮರ್ಪಕವಾಗಿ ನಡೆದಿಲ್ಲ. ಹೀಗಾಗಿ, ಸಮೃದ್ಧವಾಗಿ ಬೆಳೆದ ಸಸ್ಯ ಸಂಪತ್ತು ಸುಟ್ಟು ಹೋಗಲಿದೆ ಎನ್ನುವ ಆತಂಕ ಎದುರಾಗಿದೆ.

ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಅರಣ್ಯ ಇಲಾಖೆಯಿಂದ ನೆಟ್ಟಿದ್ದ ಸಸಿಗಳು ಚೆನ್ನಾಗಿ ಬೆಳೆದು ನಿಂತಿವೆ. ಇವುಗಳನ್ನು ಉಳಿಸಿ ಬೆಳೆಸಲು ಪ್ರತಿ ವರ್ಷ ಅರಣ್ಯ ಇಲಾಖೆಯು ಅಗತ್ಯ ತಕ್ಕಂತೆ ಬೆಂಕಿ ರೇಖೆಗಳನ್ನು ನಿರ್ವಿುಸುತ್ತಿದೆ. ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ನಂದಿಸಲು ಈ ಬೆಂಕಿ ರೇಖೆಗಳ (ತೆಗ್ಗು) ನಿರ್ವಣವು ಸಹಕಾರಿಯಾಗುತ್ತದೆ.

ಅಪಾರ ಪ್ರಮಾಣದ ಔಷಧ ಸಸ್ಯಗಳು ಇರುವ ಕಪ್ಪತಗುಡ್ಡವು ಹಸಿರಿನಿಂದ ಕಂಗೊಳಿಸತೊಡಗಿದ್ದು, ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕು ವ್ಯಾಪ್ತಿಯ 255 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ವನ್ಯಜೀವಿಧಾಮ ಪ್ರದೇಶವಿದೆ.

ಸವಾಲಿನ ಕೆಲಸ:

ಬೇಸಿಗೆ ಕಾಲದಲ್ಲಿ ಗುಡ್ಡದಲ್ಲಿ ಹತ್ತುವ ಬೆಂಕಿ ನಿಯಂತ್ರಿಸುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿದೆ. ವನ್ಯಜೀವಧಾಮ ಪ್ರದೇಶ ವ್ಯಾಪ್ತಿಯಲ್ಲಿ ಕನಿಷ್ಠ 600-700 ಕಿಮೀ ಬೆಂಕಿ ರೇಖೆ ಗುರುತಿಸಬೇಕು. ಕಳೆದ ವರ್ಷ 300 ಕಿಮೀ ಬೆಂಕಿ ರೇಖೆಗಳನ್ನು ಗುರುತಿಸಲಾಗಿತ್ತು. ಆದರೆ, ಈ ವರ್ಷ ಉತ್ತಮ ಮಳೆ ಸುರಿದಿದ್ದರಿಂದ ಸಸ್ಯ ಸಂಪತ್ತು ಹೆಚ್ಚು ಬೆಳೆದಿದೆ. ಇದನ್ನು ಕಾಪಾಡುವುದು ಅತ್ಯವಶ್ಯವಾಗಿದೆ. ಬೆಂಕಿಯಿಂದ ಗುಡ್ಡ ರಕ್ಷಿಸಲು ಬೆಂಕಿ ರೇಖೆಗಳನ್ನು ಗುರುತಿಸುವ ಕೆಲಸವನ್ನು ನವೆಂಬರ್​ನಿಂದಲೇ ಆರಂಭಿಸಲಾಗಿದ್ದು. 50-60 ಕಿಮೀ ರೇಖೆಗಳನ್ನು ನಿರ್ವಿುಸಲಾಗಿದೆ. ಈ ಬೇಸಿಗೆ ಬರುವುದೊಳಗೆ ಹೆಚ್ಚು ಸಂಖ್ಯೆಯಲ್ಲಿ ರೇಖೆಗಳನ್ನು ನಿರ್ವಿುಸಬೇಕಿದೆ. ಇದಕ್ಕೆ ಅಗತ್ಯ ಅನುದಾನ ಇಲ್ಲದಂತಾಗಿದೆ. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸರ್ಕಾರವು ಅರಣ್ಯ ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿಲ್ಲ.

ಸಿಬ್ಬಂದಿ ಕಡಿತ

ಕಪ್ಪತಗುಡ್ಡದಲ್ಲಿ ಹೊರಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿದ್ದ ಬೆಂಕಿ ನಂದಿಸುವ ಪಡೆಯ ಸಿಬ್ಬಂದಿಯ ಸೇವಾವಧಿ ಕಳೆದ ಸೆಪ್ಟೆಂಬರ್ ತಿಂಗಳಿಗೆ ಪೂರ್ಣಗೊಂಡಿದೆ. ಅನುದಾನ ಇಲ್ಲದ್ದರಿಂದ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ 32 ಜನ ಸಿಬ್ಬಂದಿಯನ್ನೂ (ಹೊರಗುತ್ತಿಗೆ) ಕೆಲಸದಿಂದ ತೆಗೆದು ಹಾಕಲಾಗಿದೆ.

1 ಕೋಟಿ ರೂ. ಬೇಕು

ಬೇಸಿಗೆ ಕಾಲದಲ್ಲಿ ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದು ಅರಣ್ಯ ಸಂಪತ್ತು ಸುಟ್ಟು ಹೋಗುತ್ತದೆ. ಇದನ್ನು ತಡೆಯಲು ಬೆಂಕಿ ರೇಖೆಗಳನ್ನು ಗುರುತಿಸುವ ಕೆಲಸ ಆಗಬೇಕಿದೆ. ಈ ಕೆಲಸಕ್ಕೆ 30ರಿಂದ 50 ಹೊರಗುತ್ತಿಗೆ ಆಧಾರದ ಸಿಬ್ಬಂದಿ ಅಗತ್ಯವಿದೆ. ಸರ್ಕಾರ 1 ಕೋಟಿ ರೂ. ಅನುದಾನ ನೀಡಿದರೆ ಬೆಂಕಿಯಿಂದ ಕಪ್ಪತಗುಡ್ಡವನ್ನು ಸಂರಕ್ಷಿಸಲು ಸಹಕಾರಿಯಾಗುತ್ತಿದೆ ಎಂದು ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕಪ್ಪತಗುಡ್ಡದಲ್ಲಿ ಅಪಾರ ಸಸ್ಯ ಸಂಪತ್ತು ಬೆಳೆದಿದ್ದು ಇದನ್ನು ರಕ್ಷಿಸಬೇಕಿದೆ. ಮುಖ್ಯವಾಗಿ ಬೆಂಕಿ ರೇಖೆಗಳನ್ನು ಗುರುತಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಬೇಸಿಗೆಯೊಳಗೆ 600 ಕಿಮೀ ಬೆಂಕಿ ರೇಖೆಗಳನ್ನು ಗುರುತಿಸಿ ಸಕಲ ತಯಾರಿ ಮಾಡಿಕೊಂಡರೆ ಕಪ್ಪತಗುಡ್ಡವನ್ನು ರಕ್ಷಿಸಬಹುದು. ಈ ಕಾರ್ಯಕ್ಕೆ ಸರ್ಕಾರ ಅನುದಾನ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಸೂರ್ಯಸೇನ, ಉಪ ಅರಣ್ಯ ಸಂರಕ್ಷಾಣಾಧಿಕಾರಿ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net