

ಮೂಲ್ಕಿ: ಕೆ.ಎಸ್.ರಾವ್ ನಗರದ ವಿಜಯಪುರ ಕಾಲನಿಯಲ್ಲಿ ಅಲ್ಲಾಬಿ ಎಂಬುವರ ಹೆಂಚಿನ ಮನೆಗೆ ಬೆಂಕಿ ತಗುಲಿದ್ದು ಮನೆಯಲ್ಲಿದ್ದ ತಾಯಿ ಮತ್ತು ಮಕ್ಕಳು ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ.
ಸೋಮವಾರ ಬೆಳಗ್ಗೆ ಮನೆಯಲ್ಲಿದ್ದ ಅಲ್ಲಾಬಿ ಚಹಾ ಮಾಡಲೆಂದು ಅಡುಗೆ ಅನಿಲದ ಒಲೆ ಹೊತ್ತಿಸಿದಾಗ ಬೆಂಕಿ ಜ್ವಾಲೆ ಎದ್ದು ಮನೆಯ ಮಾಡಿನ ಮೇಲ್ಬಾಗದ ಪಕ್ಕಾಸಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಕೂಡಲೇ ಸ್ಥಳೀಯರು ಧಾವಿಸಿ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ್ದು, ಬೆಂಕಿ ನಂದಿಸಿದ್ದಾರೆ.
ಮಾಡಿನ ಮೇಲ್ಭಾಗದ ಪಕ್ಕಾಸು ಹಾಗೂ ಮನೆಯೊಳಗಿನ ಕೆಲವಸ್ತುಗಳು ಹೊತ್ತಿ ಉರಿದು ನಷ್ಟ ಸಂಭವಿಸಿದೆ. ಸ್ಥಳೀಯರು ಅಡುಗೆ ಅನಿಲದ ಸಿಲಿಂಡರನ್ನು ಕೂಡಲೇ ಹೊರ ತಂದ ಕಾರಣ ಭಾರಿ ಅನಾಹುತ ತಪ್ಪಿದೆ.
ಸ್ಥಳಕ್ಕೆ ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಭೀಮಾಶಂಕರ್, ಮುಖ್ಯಾಧಿಕಾರಿ ಮಧುಕರ್, ಮೂಲ್ಕಿ ಪೊಲೀಸ್ ಠಾಣೆಯ ಎಎಸ್ಐ ಹರಿಶೇಖರ್, ಮೆಸ್ಕಾಂ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.