

ಎಚ್.ಡಿ.ಕೋಟೆ: ತಾಲೂಕಿನ ಹ್ಯಾಂಡ್‌ಪೋಸ್ಟ್ ಯರಳ್ಳಿ ಗ್ರಾಮದ ಜಮೀನಿಲ್ಲಿ ಒಕ್ಕಣೆ ಮಾಡಲು ಸೋಮವಾರ ಹಾಕಿದ್ದ ರಾಗಿ, ಭತ್ತ ಹಾಗೂ ಹುಲ್ಲಿನ ಮೆದೆಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ರಾಗಿ, ಭತ್ತ ಸೇರಿದಂತೆ ಅಪಾರ ಪ್ರಮಾಣದ ಹುಲ್ಲು ಭಸ್ಮವಾಗಿದೆ.
ಗ್ರಾಮದ ರೈತ ಶಿವನಂಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ಒಕ್ಕಣೆ ಮಾಡಲು ಇರಿಸಿದ್ದ ರಾಗಿ, ಭತ್ತ ಹಾಗೂ ಹುಲ್ಲಿಗೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಲು ಸತತ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಲಕ್ಷಾಂತರ ರೂ. ಮೌಲ್ಯದ ರಾಗಿ, ಭಕ್ತ, ಹುಲ್ಲು, ಸಂಪೂರ್ಣ ಭಸ್ಮವಾಗಿದೆ.
ರೈತ ಶಿವನಂಜು ಮಾತನಾಡಿ, ಹ್ಯಾಂಡ್‌ಪೋಸ್ಟ್‌ನಲ್ಲಿರುವ ಕೆಲವು ಮದ್ಯದ ಅಂಗಡಿ ಹಾಗೂ ಬಾರ್‌ನವರು ಮದ್ಯ ಸೇವನೆ ಮಾಡಿರುವ ತ್ಯಾಜ್ಯಗಳನ್ನ ನಮ್ಮ ಜಮೀನಿನ ಬಳಿ ತಂದಾಕಿ ಬೆಂಕಿ ಹಚ್ಚಿದ್ದಾರೆ. ಆದ್ದರಿಂದ ಇಂಥ ಘಟನೆ ನಡೆಯಲು ಕಾರಣವಾಗಿದೆ. ನಾವು ಹಲವು ಬಾರಿ ಅವರಿಗೆ ಹೇಳಿದ್ದರೂ ಇಲ್ಲೇ ತಂದು ತ್ಯಾಜ್ಯ ಹಾಕಿ ಬೆಂಕಿ ಹಾಕಿದ್ದಾರೆ. ಇದರಿಂದ ಸಾಲ ಮಾಡಿ ಬೆಳೆದಿರುವ ಫಸಲು ನಮ್ಮ ಕೈ ಸೇರದೆ ಬೂದಿಯಾಗಿದೆ ಎಂದು ಅಳಲು ತೋಡಿಕೊಂಡರು.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎಂ.ಜಿ.ಸೋಮಣ್ಣ, ಅಗ್ನಿಶಾಮಕ ಅಧಿಕಾರಿ ಎಸ್.ಮಂಜು, ವೈ. ಎಂ.ಗಣೇಶ್, ಟಿ.ಎಸ್.ಸುನೀಲ್, ಹೇಮಂತ್‌ಕುಮಾರ್, ಎಂ.ಸಿ.ಮುನಿಸಿದ್ದನಾಯ್ಕ, ಯಲ್ಲಪ್ಪ, ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.