

ರಾಯಚೂರು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಗೋ ಶಾಲೆಯಲ್ಲಿ ಬೆಂಕಿ ಅವಘಡ ಸೋಮವಾರ ರಾತ್ರಿ ನಡೆದಿದೆ.
ಗೋವುಗಳಿಗೆ ಮೇವು ಸಂಗ್ರಹಿಸಿಟ್ಟಿದ್ದ ಮೇವಿನ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಬೆಂಕಿಗಾಹುತಿಯಾಗಿದೆ. ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿಯಿಂದ ಮೇವು ಸುಟ್ಟು ಭಸ್ಮವಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಗೋ ಶಾಲೆ ಸಿಬ್ಬಂದಿಗಳು ಗೋಶಾಲೆಯಲ್ಲಿನ ನೂರಾರು ಗೋವುಗಳನ್ನು ಹೊರಗೆ ಬಿಟ್ಟಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಆಂಧ್ರಪ್ರದೇಶದ ಎಮ್ಮಿಗನೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ದೊಡ್ಡ ಅನಾಹುತ ತಪ್ಪಿದ್ದು ಗೋಶಾಲೆಯ ಗೋವುಗಳು ಸುರಕ್ಷಿತವಾಗಿವೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.