ಮಂಗಳೂರು ಕರಂಗಲ್ಪಾಡಿ ಕಟ್ಟಡದಲ್ಲಿ ಬೆಂಕಿ

fire
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಕರಂಗಲ್ಪಾಡಿಯ ಎಸ್ಸೆಲ್ ಚೇಂಬರ್ ಕಟ್ಟಡದ ತಳಅಂತಸ್ತಿನ ವಿದ್ಯುತ್ ನಿಯಂತ್ರಣ ಕೊಠಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಾಣಿಸಿದ್ದು, ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದೆ. ಆದರೆ ವಿದ್ಯುತ್ ನಿಯಂತ್ರಣ ಕೊಠಡಿ ಸುಟ್ಟು ಕರಕಲಾಗಿದೆ.

ಮಧ್ಯಾಹ್ನ 1.30 ಸುಮಾರಿಗೆ ಕಟ್ಟಡದ ವಿದ್ಯುತ್ ನಿಯಂತ್ರಣ ಕೊಠಡಿಯಲ್ಲಿ ಏಕಾಏಕಿ ಸ್ಫೋಟದ ಸದ್ದು ಕೇಳಿದೆ. ಕೊಠಡಿಯ ಮೂಲೆಯಲ್ಲಿದ್ದ ಜೆರಾಕ್ಸ್ ಅಂಗಡಿಯವರು ಭೀತಿಯಿಂದ ಹೊರಗೆ ಓಡಿದ್ದಾರೆ. ಅಷ್ಟರಲ್ಲಿ ಸಮೀಪದ ಬ್ಯಾಂಕ್, ಸೂಪರ್ ಮಾರ್ಕೆಟ್ ಮತ್ತಿತರ ಅಂಗಡಿಗಳ ಮಂದಿ ಹೊರಗೆ ಬಂದಿದ್ದಾರೆ. ಆಗಲೇ ಸ್ಫೋಟದಿಂದ ಬೆಂಕಿ ಕಾಣಿಸಿದ್ದು, ದಟ್ಟ ಹೊಗೆ ಆವರಿಸಿತ್ತು.

ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಕೂಡಲೇ ಪಾಂಡೇಶ್ವರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳ ವಿಭಾಗೀಯ ಅಧಿಕಾರಿ ಭರತ್ ಕುಮಾರ್ ನೇತೃತ್ವದಲ್ಲಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ ಕದ್ರಿಯ ಅಗ್ನಿಶಾಮಕದಳ ವಾಹನವೂ ಆಗಮಿಸಿ ಸಾಥ್ ನೀಡಿದೆ. ವಿದ್ಯುತ್ ನಿಯಂತ್ರಣ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅನಾಹುತ ಸಂಭವಿಸಿದ್ದಾಗಿ ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ನಿಯಂತ್ರಣ ಘಟಕ, ಪರಿಕರಗಳು ಸಂಪೂರ್ಣ ಸುಟ್ಟುಹೋಗಿವೆ. ಅಲ್ಲಿಂದ ಕೊಳವೆ ಮೂಲಕ ಹೊಗೆ ಮೂರನೇ ಮಹಡಿಗೆ ಪಸರಿಸಿದೆ. ಅಲ್ಲಿಯೂ ಹೊಗೆ ಇನ್ನಷ್ಟು ಹರಡದಂತೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ನಿಯಂತ್ರಣಕ್ಕೆ ತಂದಿದೆ. ಘಟನೆಯಿಂದ ಇಡೀ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಬ್ಯಾಂಕ್, ಅಂಗಡಿ ಮುಂಗಟ್ಟುಗಳು, ಸೂಪರ್ ಮಾರ್ಕೆಟ್, ವಕೀಲರ ಕಚೇರಿಗಳನ್ನು ಬಂದ್ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net