ಶಿವನಪುರ ದೇಗುಲದಲ್ಲಿ ಬೆಂಕಿ, ಕೋಟ್ಯಂತರ ರೂಪಾಯಿ ನಷ್ಟ

30 Nela Ph 01 Temple Fire Accident
Published on

ನೆಲಮಂಗಲ: ತಾಲೂಕಿನ ದಾಸನಪುರ ಹೋಬಳಿ ಶಿವನಪುರದ ಶ್ರೀ ಕಟ್ಟೆಮನೆ ಲಕ್ಷ್ಮೀನರಸಿಂಹಸ್ವಾಮೀ ದೇವಾಲಯದಲ್ಲಿ ಶುಕ್ರವಾರ ಬೆಳಗಿನ ಜಾವ 2.30 ಸಮಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ. ಗರ್ಭಗುಡಿ ಹೊರಗೆ ಬೆಲೆಬಾಳುವ ಮರಗಳಿಂದ ನಿರ್ಮಿಸಿದ್ದ ಮರದ ಮಂಟಪ, ತೂಗುಯ್ಯಲೆ, ಗ್ರಾೃನೈಟ್ಸ್ ಹಾಗೂ ದೇವಾಲಯ ದಾಖಲೆ ಪತ್ರ ಸುಟ್ಟು ಹೋಗಿವೆ.

ದೇವಾಲಯದಲ್ಲಿ ಮಲಗಿದ್ದ ಗೋಪುರ ನಿರ್ಮಾಣದ ಕಾರ್ಮಿಕರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದರು. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಶ್ರೀ ಕಟ್ಟೆಮನೆ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ 500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. 8 ವರ್ಷಗಳ ಹಿಂದೆಯಷ್ಟೆ ಕೋಟ್ಯಂತರ ರೂ. ವೆಚ್ಚಮಾಡಿ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿತ್ತು. ಗ್ರಾಮದಲ್ಲಿನ ಕಟ್ಟೆಮನೆ ಹೆಸರಿನ ಕುಟುಂಬಸ್ಥರು ದೇವಾಲಯ ನಡೆಸಿಕೊಂಡು ಬರುತ್ತಿದ್ದಾರೆ.

ಗ್ರಾಮಸ್ಥರ ಆರೋಪ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿಲ್ಲ. ಗೋಪುರ ನಿರ್ಮಾಣ ಕಾರ್ಯನಡೆಯುತ್ತಿದ್ದು, ದೇವಾಲಯದ ಎಲ್ಲ ಕಿಟಕಿಗಳನ್ನು ತೆರೆಯಲಾಗಿತ್ತು. ಇದೇ ವೇಳೆ ದೇವಾಲಯದ ಕಿಟಕಿಯಿಂದ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಘಟನಾಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟೆಮನೆ ಕುಟುಂಬದ ಎಂ.ಆರ್.ಲಕ್ಷ್ಮಣಪ್ಪ, ಆರ್.ವಿಶ್ವನಾಥ್, ಎಂ.ವಿ.ನಾಗರಾಜು, ಎಂ.ಟಿ.ಕೆಂಪೇಗೌಡ, ಹನುಮಂತರಾಯಪ್ಪ, ಶ್ರೀನಿವಾಸ್‌ಮೂರ್ತಿ, ಕುಮಾರ್, ನರಸಿಂಹಯ್ಯ ಮತ್ತಿತರರು ಇದ್ದರು. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net