ಸೀವೇಜ್ ಫಾರ್ಮ್‌ಗೆ ಹೊತ್ತಿದ್ದ ಬೆಂಕಿ ಹತೋಟಿಗೆ: ಸಂಸದ ಯದುವೀರ್

17fe9974-695b-4f73-9980-4918a6dd3f4e
Published on

ಮೈಸೂರು: ಬೆಂಕಿಗಾಹುತಿಯಾದ ವಿದ್ಯಾರಣ್ಯಪುರಂನ ಸೀವೇಜ್ ಫಾರ್ಮ್‌ಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡ ಅವರು, ಕಸ ವಿಂಗಡಿಸಿ ತೆಗೆಯಲು ಈ ಹಿಂದೆಯೇ ಟೆಂಡರ್ ಆಗಿತ್ತು. ಕಸ ವಿಂಗಡಣೆ ಮಾಡಿ ಉಪಯುಕ್ತ ಅಂಶಗಳನ್ನು ತೆಗೆದು ಬಳಸಲಾಗುತ್ತದೆ. ಇಲ್ಲಿ ಸುಮಾರು 8 ಲಕ್ಷ ಟನ್ ಕಸ ಇದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಯಿಂದ ಬೆಂಕಿ ವರದಿ ಪಡೆದುಕೊಂಡಿದ್ದೇನೆ. ಒಟ್ಟು 22 ಎಕರೆ ಸೀವೇಜ್ ಫಾರ್ಮ್‌ನಲ್ಲಿ ಬೆಂಕಿ ಈಗ ಹತೋಟಿಗೆ ಬಂದಿದೆ ಎಂದು ಹೇಳಿದರು.

ಕಸ ವಿಲೇವಾರಿ, ಸಂಗ್ರಹ ಸೇರಿದಂತೆ ಇನ್ನಿತರ ಕೆಲ ಅನುಮಾನಗಳು ಇದ್ದು, ಅವುಗಳನ್ನು ಜಿಲ್ಲಾಧಿಕಾರಿ, ನಗರಪಾಲಿಕೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ವರದಿ ನೀಡುವ ವಿಶ್ವಾಸ ಇದೆ ಎಂದರು.

ಸ್ವಚ್ಛತೆಗೆ ಹೆಸರಾಗಿರುವ ಮೈಸೂರಿನಲ್ಲಿ ಈ ರೀತಿಯ ಘಟನೆಗಳು ಆಗಬಾರದು. ನಗರ ಶುದ್ಧ ಗಾಳಿಗೆ ಹೆಸರು ವಾಸಿಯಾಗಿದೆ. ಬೇಸಿಗೆ ಸಮಯದಲ್ಲಿ ನಾವು ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಇದು ನಿರ್ಲಕ್ಷೃದಿಂದ ಆಗಿಲ್ಲ. ಬೇಸಿಗೆ ಇದ್ದ ಕಾರಣ ಈ ಘಟನೆ ನಡೆದಿದೆ. ಆದರೂ ಬೇಸಿಗೆ ಕಾಲದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಇದ್ದಾಗ ಕೃತ್ಯ:

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಉದಯಗಿರಿ ಕಲ್ಲು ತೂರಾಟದಂಥ ಕೃತ್ಯಗಳು ನಡೆಯುತ್ತವೆ. ರಕ್ಷಣೆ ನೀಡುವ ಪೊಲೀಸರ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದು ಸರಿಯಲ್ಲ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದರು.

ಈ ಬಗ್ಗೆ ಸಮಗ್ರ ತನಿಖೆಯಾಗಿ ವರದಿ ನೀಡಬೇಕು. ಯಾವ ಕಾರಣಕ್ಕೆ ಯಾರಿಂದ ಆಗಿದೆ ಎಂಬುದು ಗೊತ್ತಾಗಬೇಕು.ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಈ ಹಿಂದೆ ನಾಗಮಂಗಲ, ಮಂಡ್ಯ, ಬೆಂಗಳೂರಿನಲ್ಲಿ ಇಂಥ ಕೃತ್ಯ ನಡೆದಿದೆ. ಘಟನೆಯಲ್ಲಿ ಆರ್‌ಎಸ್‌ಎಸ್ ಕೈವಾಡ ಇದೆ ಎಂದು ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ಸಾಕ್ಷ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಸೈಬರ್ ತಂತ್ರಜ್ಞಾನ ಉಪಯೋಗಕ್ಕಿಂತ ದುರುಪಯೋಗವೇ ಆಗುತ್ತಿದೆ. ನಮಗೂ ಸಾಕಷ್ಟು ಸ್ಕ್ಯಾಮ್ ಕರೆಗಳು, ಒಟಿಪಿ ಕೊಡಿ ಎಂದು ಕರೆಗಳು ಬರುತ್ತಲೇ ಇರುತ್ತವೆ. ಸೈಬರ್ ಅಪರಾಧ ಕುರಿತು ಜಾಗೃತಿ ಇರುವುದರಿಂದ ನಾನು ಈವರೆಗೆ ಸೈಬರ್ ಕ್ರೈಂ ಜಾಲಕ್ಕೆ ಬಲಿಯಾಗಿಲ್ಲ. ಸೈಬರ್ ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿ ಜತೆ ಸೇರಿ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.

ಅರಮನೆಯನ್ನು ಗುರಿಯಾಗಿಸಲಾಗುತ್ತಿದೆ

ಅರಮನೆಯನ್ನು 1996ರಿಂದಲೂ ಗುರಿಯಾಗಿಸಿಕೊಳ್ಳುತ್ತ ಬರುತ್ತಿದ್ದು, ನಾನು ಸಂಸದನಾದ ಬಳಿಕ ಈ ವಿಚಾರ ಹೆಚ್ಚು ಮುನ್ನೆಲೆಗೆ ಬರುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಸಂಸದ ಯದುವೀರ ಒಡೆಯರ್ ಟೀಕಿಸಿದರು.

ಸರ್ಕಾರದೊಂದಿಗಿನ ಸಂಘರ್ಷದಲ್ಲಿ ಮೂರು ದಶಕದಿಂದ ತಂದೆ ಅವರು ಕಷ್ಟ ಅನುಭವಿಸಿದರು. ಇಡೀ ಅರ್ಧ ಜೀವನ ನ್ಯಾಯಾಲಯದ ವ್ಯಾಜ್ಯದಲ್ಲೇ ಕಳೆದರು. ಅವರು ಹೋರಾಟ ಮಾಡಿಯೇ ಕಾಲವಾದರು ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಅರಮನೆಗೆ ಟಿಡಿಆರ್ ಫಿಕ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತವಾಗಿ ನಡೆದುಕೊಳ್ಳುತ್ತಿಲ್ಲ. ಸರ್ಕಾರ ಮೊದಲಿನಿಂದಲೂ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ನಮಗೆ ಟಿಡಿಆರ್ ಸರ್ಟಿಫಿಕೇಟ್ ನೀಡಿದರೆ ಸಾಕು, ಯಾವುದೇ ಪರಿಹಾರ ಬೇಡ. ಆದರೆ ಸರ್ಕಾರ ಇದಕ್ಕೆ ಮನಸು ಮಾಡುತ್ತಿಲ್ಲ. ನಾವು ನ್ಯಾಯಾಲಯದಲ್ಲಿ ಪ್ರಕರಣ ಗೆದ್ದರೂ ಟಿಡಿಆರ್ ನೀಡುತ್ತಿಲ್ಲ. ಆದರೆ ಸರ್ಕಾರ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ. ಜನರೇ ಇದನ್ನು ಮುಂದಿನ ದಿನಗಳಲ್ಲಿ ಪ್ರಶ್ನೆ ಮಾಡುತ್ತಾರೆ ಎಂದರು.

ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ನಾನು ಮಾತನಾಡಲ್ಲ. ಅರಮನೆ ಜಾಗದಲ್ಲಿ ರಸ್ತೆ ವಿಸ್ತರಣೆ ಮಾಡಬೇಕಾದರೆ ಟಿಡಿಆರ್ ನೀಡಿ ಎಂಬುದಷ್ಟೇ ನನ್ನ ಬೇಡಿಕೆ. ಆದರೆ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ. ಕುರುಬಾರಹಳ್ಳಿ, ಗರಿಕೆಮಾಳ ಯಾವ ವಿಷಯದಲ್ಲೂ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net