

ಮಂಗಳೂರು: ಸಂಪಾಜೆ ಗ್ರಾಮದ ಕಲ್ಲಗುಂಡಿಯಲ್ಲಿ ಶನಿವಾರ ಮಧ್ಯರಾತ್ರಿ ನಡೆದ ವಿದ್ಯುತ್ ಅನಾಹುತದಲ್ಲಿ ಕಟ್ಟಡ ಬೆಂಕಿಗೆ ಆಹುತಿಯಾಗಿದೆ. ಆ ಕಟ್ಟಡದಲ್ಲಿದ್ದ ಟೈಯರ್ ಅಂಗಡಿ ಸೋಡಾ ಫ್ಯಾಕ್ಟರಿ ಮತ್ತು ಹೋಟೆಲು ಭಸ್ಮಗೊಂಡಿವೆ.
ಮಧ್ಯರಾತ್ರಿ 12.30 ರ ಸುಮಾರಿಗೆ ಅಂಗಡಿಗಳ ಒಳಗಿಂದ ಬೆಂಕಿ ಕಾಣಿಸಿಕೊಂಡಿತು. ಆದರೆ ಆ ವೇಳೆಗೆ ಧಾರಾಕಾರ ಮಳೆ ಸುರಿಯುತ್ತಿದ್ದುರಿಂದ ಬೆಂಕಿ ಹೊರಗಡೆ ಬಂದಿರಲಿಲ್ಲ. ಬೆಂಕಿ ಬಿದ್ದ ವಾಣಿಜ್ಯ ಮಳಿಗೆಯ ಹಿಂಬದಿಯಲ್ಲೇ ಕಟ್ಟಡದ ಮಾಲೀಕ ಮಹಮ್ಮದ್ ರವರ ಮನೆ ಇದ್ದು ಅವರು ಮತ್ತು ಊರವರು ಸೇರಿ ಅಗ್ನಿಶಾಮಕ ದಳಕ್ಕೆ ಫೋನಾಯಿಸಿದರು. ಆ ವೇಳೆಗೆ ಮಳೆ ಕಡಿಮೆಯಾದ್ದರಿಂದ ಬೆಂಕಿ ವಾಣಿಜ್ಯ ಮಳಿಗೆಯ ಮೇಲ್ಬಾವಣಿಯಿಂದ ಮೇಲಕ್ಕೆ ಏಳತೊಡಗಿತು.
ಒಳಗೆ ಸಿಲಿಂಡರ್ ಕೂಡ ಇದ್ದುದರಿಂದ ಹತ್ತಿರ ಹೋಗಲು ಭಯಪಡುವಂತಾಗಿತ್ತು. ಲಿಗೋರಿ ಡಿಸೋಜ ರವರ ಟೈರಂಗಡಿ ಮುಹಮ್ಮದ್ ರವರ ಸೋಡಾ ಫ್ಯಾಕ್ಟರಿ ಮತ್ತು ಆನಂದರವರ ಹೋಟೆಲ್ ಬೆಂಕಿಗೆ ಆಹುತಿಯಾದವು. ಫೈರ್ ಸರ್ವಿಸ್ ನವರು ಬರುವುದು ತಡವಾಗಬಹುದು ಎಂಬ ಸುಳಿವು ದೊರೆತು, ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಜಿ.ಕೆ.ಹಮೀದ್ ಸೇರಿದಂತೆ ಅಲ್ಲಿ ಸೇರಿದ್ದ ನೂರಾರು ಯುವಕರು ಬಕೆಟ್ಟು ಕೊಡಪಾನಗಳಲ್ಲಿ ನೀರು ತಂದು ಬೆಂಕಿಗೆ ರಾಚ ತೊಡಗಿದರು. ಇದರಿಂದ ಬೆಂಕಿ ಮತ್ತಷ್ಟು ವಿಸ್ತರಣೆಯಾಗುವುದಕ್ಕೆ ತಡೆಯಾಯಿತು. ರಾತ್ರಿ 1.40 ರ ಸುಮಾರಿಗೆ ಅಗ್ನಿಶಾಮಕ ದಳದವರು ಬಂದರು. ಅವರು ನೀರು ಹಾಯಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು. ಟಯರ್ ಅಂಗಡಿಯ ಒಳಗಡೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದುದರಿಂದ ಈ ಅವಘಡ ಸಂಭವಿಸಿರುವುದಾಗಿ ಹೇಳಲಾಗುತ್ತಿದೆ. ಲಿಗೋರಿ ಡಿಸೋಜರವರು ಕೆಲದಿನಗಳ ಹಿಂದಷ್ಟೇ ಒಂದೂವರೆ ಲಕ್ಷ ರೂ.ಗಳ ಟಯರ್ ತಂದಿದ್ದರೆನ್ನಲಾಗಿದೆ.