

ನಂಜನಗೂಡು: ಸಮೀಪದ ಕತ್ವಾಡಿಪುರ ಗ್ರಾಮದಲ್ಲಿ ಕೆಮಿಕಲ್ ಪದಾರ್ಥಗಳನ್ನು ಸಂಗ್ರಹಿಸಿದ್ದ ಗೋದಾಮಿಗೆ ಬುಧವಾರ ಬೆಂಕಿ ಬಿದ್ದು ಗ್ರಾಮಸ್ಥರದಲ್ಲಿ ಆತಂಕ ಸೃಷ್ಟಿಯಾಗಿತ್ತು.
ಜುಬಿಲಿಯಂಟ್ ಕಾರ್ಖಾನೆಗೆ ಸೇರಿದ ಕೆಮಿಕಲ್ ಸಂಗ್ರಹಿಸಿರುವ ಹಳೇ ಟ್ಯಾಂಕರ್ ಮತ್ತು ಇತರ ಪದಾರ್ಥಗಳನ್ನು ಮೈಸೂರು ಮೂಲದ ವ್ಯಕ್ತಿಯೊಬ್ಬರು ಇಲ್ಲಿ ಸಂಗ್ರಹಿಸಿದ್ದರು ಎನ್ನಲಾಗಿದೆ. ಏಕಾಏಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಳೇ ಟ್ಯಾಂಕ್ ಸ್ಫೋಟಗೊಂಡಿದೆ. ಸ್ಫೋಟದ ಶಬ್ದಕ್ಕೆ ಹೆದರಿ ಕತ್ವಾಡಿಪುರ ಗ್ರಾಮಸ್ಥರು ಮನೆಯಿಂದ ಹೊರ ಬಂದಿದ್ದಾರೆ. ಬಳಿಕ ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗ್ರಾಮದ ಒಳಭಾಗದಲ್ಲಿರುವ ಕೆಮಿಕಲ್ ಸಂಗ್ರಹಿಸಿರುವ ಗೋದಾಮು ಸ್ಥಳಾಂತರಿಸುವಂತೆ ಕತ್ವಾಡಿಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದರು.