ಆಯುರ್ವೇದ ಆಸ್ಪತ್ರೆಯಲ್ಲಿ ಬೆಂಕಿ ಅವಗಢ

udp-23-hospital fire
Published on

ಉಡುಪಿ: ಗುಂಡಿಬೈಲು ಪೆರಂಪಳ್ಳಿ ಮುಖ್ಯರಸ್ತೆಯ ದೊಡ್ಡಣಗುಡ್ಡೆ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ನವೀಕರಣ ಕಾರ್ಯ ನಡೆಯುತ್ತಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಬೆಳಗ್ಗೆ ಸುಮಾರು 7 ಗಂಟೆಗೆ ಆಸ್ಪತ್ರೆಯ ತಳ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಡುಗೆ ಮಾಡುತ್ತಿದ್ದ ಕೆಲಸದಾಕೆ, ತಕ್ಷಣ ಹೊರಗೆ ಬಂದು ಸ್ಥಳಿಯರಿಗೆ ಮಾಹಿತಿ ನೀಡಿದ್ದಾರೆ. ಅವರು ಉಡುಪಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಉಡುಪಿ ನಗರ ಹಾಗು ಮಲ್ಪೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ದೌಡಾಯಿಸಿ ಸತತ 1.30 ಗಂಟೆ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಆಸ್ಪತ್ರೆಯ ತಳ ಅಂತಸ್ತು, ಮೊದಲ ಮಹಡಿ ಬೆಂಕಿಗೆ ಆಹುತಿಯಾಗಿದ್ದು, 2 ಮತ್ತು 3ನೇ ಮಹಡಿ ಹೊಗೆಯಿಂದ ಹಾನಿಯಾಗಿದೆ. ಆಸ್ಪತ್ರೆ ಒಳಗಿದ್ದ ಬೆಡ್​ ಗಳು, ಮರದ ಫರ್ನಿಚರ್​, ಮೆಡಿಸಿನ್​ ಎಲ್ಲವೂ ಸುಟ್ಟು ಕರಕಲಾಗಿವೆ. ಅಂದಾಜು 20 ರಿಂದ 30 ಲಕ್ಷ ನಷ್ಟ ಅಂದಾಜಿಸಲಾಗಿದೆ. ಆಯುರ್ವೇದ ಆಸ್ಪತ್ರೆಯ ನವೀಕರಣ ಕಾಮಗಾರಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ರೋಗಿಗಳು ಯಾರು ಇರಲಿಲ್ಲ. ಟೈಲ್ಸ್​ ಹಾಕಲು ಬಂದಿದ್ದ ಇಬ್ಬರು ಕಾರ್ಮಿಕರು ಮೊದಲ ಅಂತಸ್ತಿನಲ್ಲಿ ಮಲಗಿದ್ದು, ಬೆಂಕಿಯನ್ನು ಕಂಡು ಕಿಟಕಿ ಮೂಲಕ ಹೊರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಮಂಗಳೂರಿನ ಅಧಿಕಾರಿ ಬಿ.ಎನ್​ ತಿರುಮಲೇಶ್​, ಉಡುಪಿ ಅಗ್ನಿಶಾಮಕ ಠಾಣೆಯ ಅಧಿಕಾರಿ ವಿನಾಯಕ್​ ಕಲ್ಗುಟಕರ್​, ರವೀಂದ್ರ, ಮಲ್ಪೆಯ ಶಫಿ ಹಾಗು ಉಡುಪಿ & ಮಲ್ಪೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.

ಎಚ್ಚರಿಸಿದ ಸಾಕು ನಾಯಿ
ಆಯುರ್ವೇದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಮುಂಭಾಗದ ತೆರೆಸಾ ಅಲ್ಮೇಡಾ ಎಂಬುವವರ ಮನೆಯ ಸಾಕು ನಾಯಿ ವಿಚಿತ್ರ ರೀತಿಯಲ್ಲಿ ಬೊಗಳಿದ್ದು, ಅವರು ಮನೆಯಿಂದ ಹೊರಗೆ ಬರುವವರೆಗೂ ಆಸ್ಪತ್ರೆ ನೋಡಿ ಬೊಗಳುತ್ತಿತ್ತು. ಅವರು ಹೊರಬಂದು ನೋಡಿದಾಗ ಆಸ್ಪತ್ರೆಯಿಂದ ದಟ್ಟ ಹೊಗೆ ಬರುವುದನ್ನು ಗಮನಕ್ಕೆ ಬಂದಿದೆ. ತಕ್ಷಣ ಅವರು ಮಕ್ಕಳಿಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಅವರು ಸ್ನೇಹಿತರೊಂದಿಗೆ ಅಡುಗೆ ಕೋಣೆಯಿಂದ ಸಿಲಿಂಡರ್​ ಹಾಗೂ ಪೋರ್ಟಿಕೊದಲ್ಲಿದ್ದ ಕಾರನ್ನು ಎತ್ತಿ ಹೊರಗೆ ತಂದಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net