

ರಾಯಚೂರು: ನಗರದ ಮಹಾವೀರ ವೃತ್ತದಲ್ಲಿರುವ ಎಲೆಕ್ಟ್ರಿಕಲ್ ಬೈಕ್ ಮತ್ತು ಗಿಗಾ ೈಬರ್ ಪ್ಲೇ ಅಂಗಡಿಯಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಎರಡು ಅಂತಸ್ತಿನ ಕಟ್ಟಡದ ತುಂಬಾ ಬೆಂಕಿ ವ್ಯಾಪಿಸಿಕೊಂಡಿದ್ದು, ಎಲೆಕ್ಟ್ರಿಕಲ್ ಬೈಕ್‌ನ ಬ್ಯಾಟರಿ ಸ್ಪೋಟದಿಂದ ಬೆಂಕಿ ಹತ್ತಿಕೊಂಡಿದೆ ಎಂದು ಹಾಗೂ ವಿದ್ಯುತ್ ಶಾಟ್ ಸರ್ಕೂಟ್‌ನಿಂದ ಬೆಂಕಿ ಹತ್ತಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಂಗಡಿಯಲ್ಲಿದ್ದವರು ಹೊರ ಬಂದಿದ್ದು, ಶ್ರೀನಿವಾಸ ಎಂಬಾತ ಮೊದಲ ಮಹಡಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಕ್ಕದಲ್ಲಿಯೇ ಬಟ್ಟೆ ಅಂಗಡಿ, ಮತ್ತೊಂದೆಡೆ ಚಾಟ್ ಅಂಗಡಿಯಿದ್ದು, ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೆ ವ್ಯಾಪಿಸದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ಆರಿಸಲು ಹರ ಸಾಹಸ ಪಡುವಂತಾಯಿತು. ಮೊದಲ ಮತ್ತು ಎರಡನೇ ಮಹಡಿಯ ಕಿಟಕಿಗಳು ಮುಚ್ಚಿದ್ದರಿಂದ ಆ ಮಹಡಿಯಲ್ಲಿನ ಬೆಂಕಿ ನಂದಿಸಲು ಕಷ್ಟಕರವಾಗಿತ್ತು. ಕಿಟಕಿಯ ಗಾಜುಗಳನ್ನು ಒಡೆದು ನೀರು ಹಾಕುವ ಮೂಲಕ ಬೆಂಕಿ ನಂದಿಸಲಾಯಿತು.
ಅಂಗಡಿಯಲ್ಲಿದ್ದ ಮೂರು ಎಲೆಕ್ಟ್ರಿಕಲ್ ಬೈಕ್‌ಗಳು ಮತ್ತು ಅಂಗಡಿ ಮುಂದೆ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳು ಬೆಂಕಿಗೆ ಸುಟ್ಟು ಕರಕಲಾಗಿದ್ದು, ಅಂಗಡಿಯಲ್ಲಿದ್ದ ಎಲ್ಲ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಸದರ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.