ಕಾಸರಗೋಡು: ನಗರದ ಚಕ್ಕರ್ಬಜಾರ್ನಲ್ಲಿರುವ ಪೇಂಟಿನ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆಯಿಂದ ಭಾರಿ ದುರಂತ ತಪ್ಪಿದೆ. ಎಂ.ಜಿ ರಸ್ತೆ ಸನಿಹದ ಚಕ್ಕರ್ಬಜಾರ್ನ ರಶೀದ್ ಎಂಬುವರ ಮಾಲೀಕತ್ವದ ಕೆ.ಎಸ್.ಟ್ರೇಡರ್ಸ್ ಎಂಬ ಸಂಸ್ಥೆಯೊಳಗಿಂದ ಶನಿವಾರ ನಸುಕಿಗೆ ಹೊಗೆ ಹೊರಬರುತ್ತಿರುವುದನ್ನು ಮನಗಂಡ ಪ್ಯಾಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಾಚರಿಸಿದ ಅಗ್ನಿಶಾಮಕ ದಳ ಬೆಂಕಿ ಶಮನಗೊಳಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ರಾತ್ರಿ ಅಂಗಡಿಯಲ್ಲಿ ಶಟರ್ಗೆ ವೆಲ್ಡಿಂಗ್ ಕೆಲಸ ನಡೆಸಲಾಗಿದ್ದು, ಇದರಿಂದ ಕಿಡಿಹಾರಿ ಮಹಡಿಯ ಮರಕ್ಕೆ ಬೆಂಕಿ ತಗುಲಿರಬೇಕೆಂದು ಸಂಶಯಿಸಲಾಗಿದೆ.