ಐಟಿ ಕಚೇರಿಯಲ್ಲಿ ಅಗ್ನಿ ದುರಂತ

Fire accident
Published on

ಮಂಗಳೂರು: ಅತ್ತಾವರದಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಗುರುವಾರ ಬೆಂಕಿ ದುರಂತ ಉಂಟಾಗಿ ಕೊಠಡಿಯೊಂದರಲ್ಲಿದ್ದ ದಾಖಲೆ ಪತ್ರ, ಕಂಪ್ಯೂಟರ್ ಹಾಗೂ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ.

ಕಟ್ಟಡದ ಮೂರನೇ ಮಹಡಿಯಲ್ಲಿರುವ ಟಿಡಿಎಸ್ ವಿಭಾಗದ ದಾಖಲೆ ಪತ್ರಗಳು ಸುಟ್ಟು ಹೋಗಿವೆ. ಆದರೆ ಇದರ ದತ್ತಾಂಶಗಳು ಕೇಂದ್ರೀಕೃತ ದಾಖಲಾತಿಯಲ್ಲಿ ಸಂಗ್ರಹವಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಸಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಮಾಹಿತಿ ಲಭಿಸಿದ ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ಅಧಿಕಾರಿಗಳು ತೆರಳಿ ಒಂದು ತಾಸಿಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದಾಗಿ ಬೆಂಕಿ ಇನ್ನೊಂದು ಕೊಠಡಿಗೆ ವ್ಯಾಪಿಸುವುದು ತಪ್ಪಿದೆ.

ಬೆಳಗ್ಗೆ 9.30ರ ವೇಳೆಗೆ ಅವಘಡ ನಡೆದಿದ್ದು, ಕಚೇರಿ ಒಳಗಿನಿಂದ ದಟ್ಟ ಹೊಗೆ ಬರುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಹಾಗೂ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net