

ಉಡುಪಿ: ಅಂಬಲಪಾಡಿಯ ಗಾಂಧಿನಗರದಲ್ಲಿ ಸೋಮವಾರ ಬೆಳಗಿನ ಜಾವ ಮನೆಗೆ ಬೆಂಕಿ ಹತ್ತಿಕೊಂಡ ಪರಿಣಾಮ ಉದ್ಯಮಿಯೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದು, ಪತ್ನಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಂಬಲಪಾಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ಉದ್ಯಮಿ ರಮಾನಂದ ಶೆಟ್ಟಿ (52) ಮೃತರು. ಪತ್ನಿ ಅಶ್ವಿನಿ ಶೆಟ್ಟಿ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆ ನೆಲಮಹಡಿಯಲ್ಲಿ ರಮಾನಂದ ಶೆಟ್ಟಿ ಹಾಗೂ ಪತ್ನಿ, ಮೊದಲ ಮಹಡಿಯಲ್ಲಿ ಮಕ್ಕಳು ನಿದ್ರಿಸುತ್ತಿದ್ದರು. ಮುಂಜಾನೆ 5.30ರ ಸುಮಾರಿಗೆ ಬೆಂಕಿ ಅವಘಡ ಉಂಟಾಗಿದ್ದು, ಮನೆ ಮರದ ಇಂಟೀರಿಯರ್ ಹೊಂದಿರುವುದರಿಂದ ತೀವ್ರಗತಿಯಲ್ಲಿ ಬೆಂಕಿ ವ್ಯಾಪಿಸಿದ್ದು, ತುಂಬಾ ಹೊಗೆಯಿಂದ ರಮಾನಂದ ಶೆಟ್ಟಿ ದಂಪತಿ ಪ್ರಜ್ಞೆ ತಪ್ಪಿ ತೀವ್ರ ಅಸ್ವಸ್ಥಗೊಂಡಿದ್ದರು ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ತಂಡ ಕೂಡಲೇ ಕಾರ್ಯಾಚರಣೆ ನಡೆಸಿ ನಾಲ್ವರನ್ನೂ ಮನೆಯಿಂದ ಹೊರಗೆ ಕರೆತಂದಿದೆ. ಇವರಲ್ಲಿ ಪ್ರಜ್ಞೆ ತಪ್ಪಿ ಅಸ್ವಸ್ಥಗೊಂಡಿದ್ದ ದಂಪತಿಯನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ರಮಾನಂದ ಶೆಟ್ಟಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮಕ್ಕಳು ಮೊದಲ ಮಹಡಿಯಲ್ಲಿ ಬಾತ್ ರೂಂ ಒಳಗೆ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ನೆಲ ಮಹಡಿ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಅಪಾರ ಪ್ರಮಾಣದ ಸ್ವತ್ತುಗಳು ನಷ್ಟವಾಗಿವೆ. ಘಟನೆಗೆ ಸೆಂಟ್ರಲೈಸ್ಡ ಎಸಿ ಶಾರ್ಟ್ ಸಕ್ಯೂರ್ಟ್ ಕಾರಣ ಎಂದು ಶಂಕಿಸಲಾಗಿದೆ.