

ಕಲಬುರಗಿ: ನಗರದ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ನಲ್ಲಿನ ಅಂಗಡಿಯೊಂದಕ್ಕೆ ಮಂಗಳವಾರ ಬೆಂಕಿ ತಗುಲಿದ ಘಟನೆ ಮಂಗಳವಾರ ನಡೆದಿದೆ. ನಿಲ್ದಾಣದ ಎರಡನೇ ಫ್ಲಾಟ್‌ಪಾರ್ಮ್ನಲ್ಲಿರುವ ಹಾಲಿನ ಉತ್ಪನ್ನಗಳ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಮಧ್ಯಾಹ್ನ ಯಾವುದೇ ರೈಲುಗಳು ಇಲ್ಲದ ಕಾರಣ ಮಾಲೀಕನು ಅಂಗಡಿ ಮುಚ್ಚಿ ಹೋಗಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ.
ತಕ್ಷಣ ಅಧಿಕಾರಿಗಳು, ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದ್ದಾರೆ. ಅಂಗಡಿಯಲ್ಲಿ ಎರಡು ಫ್ರಿಜ್‌ಗಳಿದ್ದು, ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದ್ದು, ನಿಖರ ಕಾರಣ ತಿಳಿದಿಲ್ಲ. ಕಾರಣ ಕುರಿತು ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಪ್ಪಿದ ಅವಘಡ: ಮಂಗಳವಾರ ಮಧ್ಯಾಹ್ನ ಎರಡನೇ ಪ್ಲಾಟ್ ಫಾರ್ಮ್ ಮೇಲಿನ ಅಂಗಡಿ ಬೆಂಕಿ ಬಿದ್ದಿದ್ದು, ಯಾವುದೇ ರೈಲುಗಳು ಇರಲಿಲ್ಲ. ಆದರೆ ಪಕ್ಕದ ಮೂರನೇ ಪ್ಲಾಟ್‌ಫಾರ್ಮ್ ಮೇಲೆ ಕಚ್ಚಾ ತೈಲದ ರೈಲು ನಿಂತ್ತಿತ್ತು. ಒಂದು ವೇಳೆ ಬೆಂಕಿ ರೈಲದ ವಾಹನಗಳಿಗೆ ಹಬ್ಬಿದ್ದರೆ ಭಾರಿ ದುರಂತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿ ಆತಂಕ ವ್ಯಕ್ತಪಡಿಸಿದರು. ಸಾರ್ವಜನಿಕರು, ರೈಲ್ವೆ ಇಲಾಖೆ ಅಧಿಕಾರಿಗಳು, ರೈಲ್ವೆ ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿಯ ತಕ್ಷಣ ಕಾರ್ಯಪ್ರವೃತ್ತಾದ್ದರಿಂದ ಭಾರಿ ಅವಘಡ ಸ್ವಲ್ಪದರಲ್ಲೇ ತಪ್ಪಿದಂತಾಗಿದೆ.