ಬೆಂಕಿಯಲ್ಲಿ ಬೆಂದು ಹೋದ ಬದುಕು..!

4 gdg fire 6
Published on

ಗದಗ: ನಿತ್ಯ ತಮ್ಮ ಬದುಕಿನ ಬಂಡಿ ಓಡಿಸಲು ಕೆಲವರು ತರಕಾರಿ, ಹಣ್ಣು, ಮತ್ತೆ ಕೆಲವರು ತೆಂಗಿನಕಾಯಿ, ಕಾಳು-ಕಡಿ, ಊದುಬತ್ತಿ ಹೀಗೆ ಬಗೆ-ಬಗೆಯ ವ್ಯಾಪಾರ ಮಾಡುತ್ತಿದ್ದರು. ಅವತ್ತು ಇಡೀ ದಿನ ತಮ್ಮ ವ್ಯಾಪಾರ ಮುಗಿಸಿಕೊಂಡು, ಉಳಿದದ್ದನ್ನು ತಮ್ಮ ಅಂಗಡಿಯಲ್ಲಿಯೇ ಭದ್ರವಾಗಿಟ್ಟು ಹೋಗಿದ್ದರು. ರಾತ್ರಿ ನಿದ್ರೆಗೆ ಜಾರಿ, ಬೆಳಗ್ಗೆ ಏಳುವ ಹೊತ್ತಿಗೆ ಉಪಜೀವನಕ್ಕೆ ಆಸರೆಯಾಗಿದ್ದ ಅಂಗಡಿ, ಸರಂಜಾಮು ಬೆಂಕಿಗೆ ಆಹುತಿಯಾಗಿ, ಬದುಕೇ ಬೆಂಕಿಯಲ್ಲಿ ಬೆಂದು ಹೋಗಿದೆ.

ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿ 30ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿ ಬೆಂಕಿಗಾಹುತಿಯಾದ ಘಟನೆ ನಗರದ ಗ್ರೇನ್ ಮಾರ್ಕೆಟ್​ನಲ್ಲಿ ಮಂಗಳವಾರ ಸಂಭವಿಸಿದೆ. ಬೆಳಗಿನ ಜಾವ ಹಣ್ಣಿನ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿಕೊಂಡ ಬೆಂಕಿ ಪಕ್ಕದ ಅಂಗಡಿಗೆ ತಗುಲಿದೆ. ಹೀಗೆ ಒಂದರಿಂದ ಮತ್ತೊಂದು ಅಂಗಡಿಗೆ ವ್ಯಾಪಿಸುತ್ತ ಮೂವತ್ತಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ.

ತರಕಾರಿ, ಕಿರಾಣಿ ಹಾಗೂ ಇನ್ನಿತರ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಸೇಬು, ಬಾಳೆ ಸೇರಿ ವಿವಿಧ ರೀತಿಯ ಹಣ್ಣು, ತರಕಾರಿ, ಎಲೆ, ಎಣ್ಣೆ, ಹಾಲು ಉತ್ಪನ್ನ ಸೇರಿ ವಿವಿಧ ವಸ್ತುಗಳು ಸುಟ್ಟು ಭಸ್ಮವಾಗಿವೆ. ಕೆಲ ಅಂಗಡಿಗಳಲ್ಲಿ ಅಪಾರ ಪ್ರಮಾಣದಲ್ಲಿ ಗೋಣಿ ಚೀಲ ಇದ್ದುದು ಬೆಂಕಿ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

ಸ್ಥಳಕ್ಕೆ ಅಧಿಕಾರಿಗಳ ದೌಡು: ಬೆಂಕಿ ಅವಘಡ ಸಂಭವಿಸಿದ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ್, ತಹಸೀಲ್ದಾರ್ ಶ್ರಿನಿವಾಸಮೂರ್ತಿ, ಡಿವೈಎಸ್ಪಿ ಪ್ರಲ್ಹಾದ್, ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಎಇಇ ಎಲ್.ಜಿ. ಪತ್ತಾರ, ಜೆಇ ಎಚ್.ಎ. ಬಂಡಿವಡ್ಡರ ಸೇರಿ ಅಧಿಕಾರಿಗಳು ಆಗಮಿಸಿದ್ದರು.

ನಗರಸಭೆ ಅಧಿಕಾರಿಗಳು ಹಾಗೂ ನೂರಾರು ಪೌರ ಕಾರ್ವಿುಕರು ಬೆಂಕಿ ನಿಯಂತ್ರಿಸಲು ಸಹಾಯ ಮಾಡಿದರು. ದುರಂತದ ಸುದ್ದಿ ಅವಳಿನಗರದಲ್ಲಿ ಹಬ್ಬುತ್ತಿದ್ದಂತೆ ಜನರು ಗ್ರೇನ್ ಮಾರ್ಕೆಟ್ ಕಡೆಗೆ ಹರಿದು ಬಂದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸ ಪಡಬೇಕಾಯಿತು.

ಬೆಂಕಿ ನಂದಿಸಲು ಅಗ್ನಿಶಾಮಕ ವಾಹನಗಳ ಮೂಲಕ ಸುಮಾರು ಒಂದು ಲಕ್ಷ ಲೀಟರ್ ನೀರು ಬಳಸಲಾಯಿತು. ಐವರು ಅಧಿಕಾರಿಗಳು ಸೇರಿ 30 ಜನ ಅಗ್ನಿ ಶಾಮಕ ಸಿಬ್ಬಂದಿ ಸತತ ಐದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. | ಜಿ. ಈಶ್ವರ ನಾಯ್ಕ, ಚೀಫ್ ಫೈರ್ ಆಫೀಸರ್, ಹುಬ್ಬಳ್ಳಿ ವಲಯ

30ಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಹಾನಿ ಬಗ್ಗೆ ಸದ್ಯಕ್ಕೆ ಹೇಳುವುದು ಕಷ್ಟ. ಎಲ್ಲ ಕಾರ್ಯಾಚರಣೆ ಮುಗಿದ ಬಳಿಕ ಎಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಹಾನಿ ಬಗ್ಗೆ ಸರ್ವೆ ಮಾಡಿಸಲಾಗುವುದು. ಅನಂತರ ಹಾನಿ ಕುರಿತು ಮಾಹಿತಿ ಲಭ್ಯವಾಗಲಿದೆ. | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

ಸ್ಥಳಾಂತರಕ್ಕೆ ಹುನ್ನಾರ?

ಗದಗ ಗ್ರೇನ್ ಮಾರ್ಕೆಟ್​ಗೆ ಆರು ದಶಕದ ಇತಿಹಾಸವಿದೆ. ಎಂಟು ವರ್ಷಗಳ ಹಿಂದೆ ಕೂಡ ಮಾರ್ಕೆಟ್​ನಲ್ಲಿ ಅಗ್ನಿ ದುರಂತ ನಡೆದಿತ್ತು. ಕಳೆದ ಒಂದು ವರ್ಷದಿಂದ ಗ್ರೇನ್ ಮಾರ್ಕೆಟ್ ಸ್ಥಳಾಂತರ ಮಾಡುವ ಪ್ರಯತ್ನ ನಡೆದಿತ್ತು. ಈಗ ಅಗ್ನಿ ದುರಂತ ನಡೆದಿದೆ. ಇದು ಮಾರ್ಕೆಟ್ ಸ್ಥಳಾಂತರ ಮಾಡುವ ಹುನ್ನಾರವಾಗಿದೆ ಅನ್ನುವ ಮಾತುಗಳು ಕೇಳಿಬರುತ್ತಿವೆ.

ಉಳ್ಳಾಗಡ್ಡಿ ಬಿತ್ತನೆ ಬೀಜವೂ ಭಸ್ಮ

ಬೆಂಕಿ ಅವಘಡದಲ್ಲಿ ಮೌಲಾಸಾಬ್ ಮಾನ್ವಿ ಎಂಬುವರಿಗೆ ಸೇರಿದ ಮಳಿಗೆಯಲ್ಲಿ 20 ಲಕ್ಷ ರೂ. ಮೌಲ್ಯದ ಈರುಳ್ಳಿ ಬಿತ್ತನೆ ಬೀಜ, 1 ಲಕ್ಷ ರೂ. ಮೌಲ್ಯದ ಮೆಣಸಿಣಕಾಯಿ ಬಿತ್ತನೆ ಬೀಜ ಹಾಗೂ ತರಕಾರಿ ಬೆಂಕಿಗೆ ಆಹುತಿಯಾಗಿದೆ. ರಿಯಾಜ್ ಭಾವಿಕಟ್ಟಿ ಅವರಿಗೆ ಸೇರಿದ ಕರ್ಪರ, ಊದುಬತ್ತಿ ಹಾಗೂ ಪೂಜಾ ಸಾಮಗ್ರಿ ಅಂಗಡಿ, ಪೀರ್​ಸಾಬ್ ಕಾಟಾಪೂರ ಅವರಿಗೆ ಸೇರಿದ ಹಣ್ಣಿನ ಅಂಗಡಿ, ಶಂಶುದ್ದೀನ್ ಅನ್ಸಾರಿ ಅವರಿಗೆ ಸೇರಿದ ಅಡಿಕೆ ಅಂಗಡಿ, ನಾಗರಾಜ ಬಳ್ಳಾರಿ ಅವರಿಗೆ ಸೇರಿದ ತರಕಾರಿ ಅಂಗಡಿ, ಕಿರಣ ಪವಾರ ಅವರಿಗೆ ಸೇರಿದ ನಿಂಬೆಹಣ್ಣು ಅಂಗಡಿ, ಬಾಷಾಸಾಬ್ ಸೊನ್ನೇಖಾನ್ ಅವರಿಗೆ ಸೇರಿದ ಮೆಣಸಿನಕಾಯಿ ಅಂಗಡಿ ಸೇರಿ 30 ಕ್ಕೂ ಹೆಚ್ಚು ಅಂಗಡಿಗಳು ಆಗ್ನಿಗೆ ಆಹುತಿಯಾಗಿವೆ.

ಗ್ರೇನ್ ಮಾರ್ಕೆಟ್ ಅಗ್ನಿ ಅವಘಡದ ಕುರಿತು ಸಂಶಯ ಸೃಷ್ಟಿಯಾಗಿದೆ. ಕೆಇಬಿಯವರು ಇದು ಶಾರ್ಟ್ ಸರ್ಕ್ಯೂಟ್​ನಿಂದ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ದುರಂತ ಸಂಭವಿಸಿದ್ದು ಹೇಗೆ? ಪೊಲೀಸರು ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಗ್ನಿ ದುರಂತದಿಂದ ಸಣ್ಣ ವ್ಯಾಪಾರಸ್ಥರ ಬದುಕು ಬೀದಿಗೆ ಬಿದ್ದಿದೆ. | ಫಾರೂಕ್ ಹುಬ್ಬಳ್ಳಿ, ಹೂವು ವ್ಯಾಪಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net