

ವಿಟ್ಲ: ಕಡೂರು - ಕಾಞಂಗಾಡು ಹೆದ್ದಾರಿಯ ಕುದ್ದುಪದವಿನ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಮೂಲಕ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ.
ಕುದ್ದುಪದವು ನಿವಾಸಿ ಅಶ್ರಫ್ ಅವರಿಗೆ ಸೇರಿದ ಅಂಗಡಿ ಇದಾಗಿದೆ. ಶನಿವಾರ ಬೆಳಗ್ಗಿನ ಜಾವ ಅಡ್ಯನಡ್ಕ ಭಾಗಕ್ಕೆ ಹೋಗುತ್ತಿದ್ದ ಕೋಳಿ ಸಾಗಾಟ ವಾಹನದವರು ಅಂಗಡಿಯ ಮುಂಭಾಗದಲ್ಲಿ ಬೆಂಕಿಯನ್ನು ಗಮನಿಸಿ, ಸ್ಥಳೀಯರಿಗೆ ಮಾಹಿತಿ ನೀಡಿದ್ದಲ್ಲದೆ ಬೆಂಕಿ ನಂದಿಸಲು ಸಹಾಯ ಮಾಡಿದ್ದಾರೆ.
ಬೆಂಕಿ ಇಟ್ಟ ಕೆಲವೇ ಕ್ಷಣದಲ್ಲಿ ನಂದಿಸಿದ ಕಾರಣದಿಂದ ಅಂಗಡಿಯ ಬಾಗಿಲ ಬಳಿಯಲ್ಲಿದ್ದ ಕೆಲವು ಹಣ್ಣುಹಂಪಲು ಸೇರಿ ಸಾಮಾಗ್ರಿಗಳು ಉರಿದಿದ್ದು, ಹೆಚ್ಚಿನ ಹಾನಿಯಾಗಿಲ್ಲ. ಅಂಗಡಿಯ ಪಕ್ಕದಲ್ಲಿರುವ ಗೇಟು ಅರ್ಧ ತೆರೆದ ಸ್ಥಿತಿಯಲ್ಲಿದ್ದು, ಅಂಗಡಿ ಮಾಲೀಕನ ಮೇಲಿನ ದ್ವೇಷಕ್ಕೆ ಬೆಂಕಿ ಹಚ್ಚಲು ಹೋಗಿರುವ ಸಾಧ್ಯತೆಯಿದೆ. ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ತನಿಖೆ ನಡೆಸುವ ಸಂದರ್ಭದಲ್ಲಿ ಅಂಗಡಿಯ ಮುಂಭಾಗದಲ್ಲಿದ್ದ ಪೆಟ್ಟಿಗೆಯಲ್ಲಿ ಕೃತ್ಯಕ್ಕೆ ಬಳಸಿದ ಪೆಟ್ರೋಲ್ ಬಾಟಲಿ ಪತ್ತೆಯಾಗಿದೆ.