

ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಹೊಸಹಳ್ಳಿ ಗ್ರಾಮದಲ್ಲಿ ಬೆಂಕಿ ತಗುಲಿ ಗುಡಿಸಲು ಭಸ್ಮವಾಗಿದೆ.
ಗ್ರಾಮದ ವೆಂಕಟಮ್ಮ, ಚಿಕ್ಕಣ್ಣ ದಂಪತಿ ರಾತ್ರಿ ಊಟ ಮುಗಿಸಿ ಮಲಗಿದ್ದಾರೆ. ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಬೆಂಕಿಯ ಜ್ವಾಲೆ ನೋಡಿ ಜೋರಾಗಿ ಕೂಗಿಕೊಂಡಾಗ ನೆರೆಹೊರೆಯವರು ಸ್ಥಳಕ್ಕೆ ತಕ್ಷಣ ಧಾವಿಸಿ ತೊಂಬೆಯಿಂದ ನೀರು ತಂದು ಹಾಕಿ, ಗುಡಿಸಿನ ಒಳಗಡೆ ಇದ್ದ ದಂಪತಿಯನ್ನು ಹೊರಗಡೆ ಕರೆತಂದು ರಕ್ಷಿಸಿದರು.
ಗುಡಿಸಲಿಗೆ ಎಷ್ಟೇ ಹಾಕಿದರೂ ಅತಿಯಾದ ಜ್ವಾಲೆಯನ್ನು ನಂದಿಸಲು ಆಗಲಿಲ್ಲ. ಇದರಿಂದ ಗುಡಿಸಲಿನೊಳಗಿದ್ದ 20 ಮೇಕೆಗಳಲ್ಲಿ 19 ಸಜೀವ ದಹನವಾಗಿವೆ. ಒಂದು ಮೇಕೆ ಪಾರಾದರೂ ಸುಟ್ಟಗಾಯಗಳಾಗಿವೆ. ಅಡುಗೆ ಪಾತ್ರೆಗಳು, ವಸ್ತುಗಳು, ಬೈಸಿಕಲ್, ಬಟ್ಟೆಗಳು ಸೇರಿದಂತೆ ವಿವಿಧ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ತಾಪಂ ಇಒ ಸಂದೀಪ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರವೀಣ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಉಮಾಶಂಕರ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್, ಗ್ರಾಪಂ ಉಪಾಧ್ಯಕ್ಷ ಎಸ್.ದಯಾನಂದ, ಸದಸ್ಯರಾದ ವಿ.ಎಚ್.ಶಿವಲಿಂಗಯ್ಯ, ವಿ.ಜೆ.ಸುನೀಲ್, ವಿ.ಆರ್.ಸುನೀಲ್, ಮುಖಂಡ ಆರ್.ವಿ.ಅಭಿನಂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.