ತೈಲ ಗೋದಾಮಿನಲ್ಲಿ ಅಗ್ನಿ ಅವಘಡ

fire
Published on

 ವಿಜಯವಾಣಿ ಸುದ್ದಿಜಾಲ ನೆಲಮಂಗಲ

ಬೆಂಗಳೂರು ಉತ್ತರ ತಾಲೂಕಿನ ಅಡಕಿಮಾರನಹಳ್ಳಿ ಗ್ರಾಮದಲ್ಲಿನ ತೈಲ ಗೋದಾಮಿನಲ್ಲಿ ಮಂಗಳವಾರ ಅಗ್ನಿಅವಘಡ ಸಂಭವಿಸಿದ್ದು ಕೋಟ್ಯಂತರ ರೂ.ಮೌಲ್ಯದ ತೈಲ ಸುಟ್ಟುಭಸ್ಮವಾಗಿದೆ. ಅವಘಡದಲ್ಲಿ ಯಾವುದೇ ಸಾವು ನೋವು ಸಂಭಿವಿಸಿಲ್ಲ. ಸುಮಾರು 30ಕೋಟಿ ರೂ.ಮೌಲ್ಯದ ತೈಲ ಬೆಂಕಿ ಜ್ವಾಲೆಗೆ ಸಂಪೂರ್ಣ ಸುಟ್ಟಿದೆ ಎಂದು ಕಂಪನಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಮಾಜಿ ಕಂದಾಯ ಸಚಿವ ಎಚ್.ಸಿ ಶ್ರೀಕಂಠಯ್ಯ ಅವರ ಅಳಿಯ ಬೆಂಗಳೂರಿನ ಉದ್ಯಮಿ ಕೃಷ್ಣಪ್ಪ ಎಂಬುವವರಿಗೆ ಸೇರಿದ್ದ ಗೋದಾಮು 15 ವರ್ಷದ ಹಿಂದೆ ನಿರ್ಮಾಣವಾಗಿತ್ತು.5 ವರ್ಷದಿಂದ ಸೇಲ್ ಇಂಡಿಯಾ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಎಂಬ ತೈಲ ಕಂಪನಿಗೆ ಗೋದಾಮು ಬಾಡಿಗೆ ನೀಡಿದ್ದರು. ಮುಂಬೈನಿಂದ ಶೆಲ್ ಕಂಪನಿಯ ತೈಲವನ್ನು ಬೆಂಗಳೂರಿನ ಅಡಕಿಮಾರನಹಳ್ಳಿ ಗೋದಾಮಿಗೆ ಆಮದು ಮಾಡಿಸಿಕೊಂಡು ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶದ ಸೇರಿ ಕೇರಳ ರಾಜ್ಯಕ್ಕೆ ತೈಲವನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಬೆಳಗಿನ ಜಾವ 3 ಗಂಟೆಯಲ್ಲಿ ಅವಘಡ: ಮೇ 13ರಂದು ಬೆಳಗಿನಜಾವ 3 ಗಂಟೆ ವೇಳೆ ಶೆಲ್ ಕಂಪನಿಯ ತೈಲ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸೆಕ್ಯೂರಿಟಿ ಗಾರ್ಡ್ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾನೆ. ಬೆಂಕಿಜ್ವಾಲೆ ಹೆಚ್ಚಾಗಿದ್ದು ಗೋದಾಮಿನ ವ್ಯವಸ್ಥಾಪಕರಿಗೆ ಮಾಹಿತಿ ನೀಡಿ ಬಳಿಕ ಅಗ್ನಿ ಶಾಮಕ ಠಾಣೆಗೆ ತಿಳಿಸಿದ್ದಾನೆ. ಸ್ಥಳಕ್ಕೆ ನೆಲಮಂಗಲ ಆಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಮುಂದಾಗಿದೆ ಬೆಂಕಿಯ ಜ್ವಾಲೆ ಮತ್ತಷ್ಟು ಹೆಚ್ಚಾಗಿದೆ. ಆಕಾಶದ ಎತ್ತರಿಗೆ ದಟ್ಟ ಹೋಗೆ ಆವರಿಸಿತ್ತು. ಅಗ್ನಿ ಅವಘಡ ಕಾರಣ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 ಆಗ್ನಿ ಶಾಮಕ ಠಾಣಾ ಸಿಬ್ಬಂದಿ ಭಾಗಿ: ನೆಲಮಂಗಲ, ಪೀಣ್ಯ, ಮಾಗಡಿ ರಸ್ತೆ, ಹೆಬ್ಬಾಳ, ರಾಜಾಜಿನಗರ, ಥಣಿಸಂದ್ರ, ಸುಂಕದಕಟ್ಟೆ ಮತ್ತು ಯಶವಂತಪುರ ಅಗ್ನಿಶಾಮಕ ಠಾಣಾ ಸಿಬ್ಬಂದಿ ಸೇರಿ ನೂರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 12 ಗಂಟೆ ಸತತ ಪ್ರಯತ್ನದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ತಪ್ಪಿದ ಭಾರಿ ಅನಾಹುತ: ಕ್ಷಣಕ್ಷಣಕ್ಕೂ ಬೆಂಕಿ ಜ್ವಾಲೆ ಹರಡುತ್ತಿದ್ದು ಸುತ್ತಮುತ್ತಲಿನ ಗೋದಾಮುಗಳು ಮತ್ತು ಮನೆಗಳಿಗೆ ತಗುಲುವ ಆತಂಕ ಎದುರಾಗಿತ್ತು. ತೈಲ ಗೋದಾಮಿಗೆ ಹೊಂದಿಕೊಂಡದಂತೆ ದಿನಸಿ ಪದಾರ್ಥಗಗಳ ಗೋದಾಮು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಗೋದಾಮುಗಳಿದ್ದು, ಆಗ್ನಿ ಶಾಮಕ ಸಿಬ್ಬಂದಿ ಮುಂಜಾಗ್ರತೆಯಿಂದ ಭಾರಿ ಪ್ರಮಾಣದ ಅನಾಹುತ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net