ಬೆಡದಹಳ್ಳಿ ಗ್ರಾಮದಲ್ಲಿ ಅಗ್ನಿ ಅವಘಡ ಪ್ರಾತ್ಯಕ್ಷಿಕೆ

Published on

ಕಿಕ್ಕೇರಿ: ನೈಸರ್ಗಿಕ ದುರಂತಗಳು ಮತ್ತು ಅವಗಢಗಳು ಸಂಭವಿಸಿದಾಗ ಮಾನವನ ಜೀವ ಮತ್ತು ನೆಮ್ಮದಿ ಕಾಪಾಡುವುದು ನಮ್ಮ ಕರ್ತವ್ಯ ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿ ಚಂದ್ರಶೇಖರ್ ಹೇಳಿದರು. ಸಮೀಪದ ಬೆಡದಹಳ್ಳಿ ಗ್ರಾಮದ ಶ್ರೀ ಪಂಚಭೂತೇಶ್ವರ ಮಠದಲ್ಲಿ ನಡೆಯುತ್ತಿರುವ ಸಂಸ್ಕಾರ ಜ್ಞಾನ ಶಿಬಿರದಲ್ಲಿ ಅವರು ಬುಧವಾರ ಅಗ್ನಿ ಅಪಘಾತ ಸಂದರ್ಭ ತೆಗೆದುಕೊಳ್ಳಬಹುದಾದ ಕ್ರಮಗಳು ಹಾಗೂ ಬೆಂಕಿ ನಂದಿಸುವ ಮಾರ್ಗೋಪಾಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಡುಗೆ ಮನೆಯಲ್ಲಿ ಬಳಸುವ ಗ್ಯಾಸ್ ಸಿಲಿಂಡರ್ ಸ್ಫೋಟವಾಗುತ್ತಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಸಿಲಿಂಡರ್‌ನಲ್ಲಿರುವ ರೆಗ್ಯುಲೇಟರ್ ಹಾಗೂ ಪೈಪಿನಲ್ಲಿ ಗ್ಯಾಸ್ ಸೋರಿಕೆಯಾಗುತ್ತಿರುವ ಬಗ್ಗೆ ಮನೆಯಲ್ಲಿ ತಾಯಂದಿರು ಎಚ್ಚರವಾಗಿ ಪರಿಶೀಲಿಸಬೇಕು. ಅಡುಗೆ ಕೆಲಸ ಮುಗಿದ ನಂತರ ರೆಗ್ಯುಲೇಟರ್ ಅನ್ನು ಆರಿಸುವುದನ್ನು ಮರೆಯಬಾರದು ಎಂದರು.

ಅಡುಗೆ ಮನೆಗೆ ಚೆನ್ನಾಗಿ ಗಾಳಿ, ಬೆಳಕು ಬರುವಂತೆ ನೋಡಿಕೊಂಡು ಗ್ಯಾಸ್ ಸೋರಿಕೆ ಆಗುತ್ತಿರುವ ಬಗ್ಗೆ ಸುಳಿವು ದೊರೆತ ಕೂಡಲೇ ಬಾಗಿಲುಗಳನ್ನು ತೆರೆಯಬೇಕು. ಗ್ಯಾಸ್ ಹೊರಗೆ ಹೋಗುವಂತೆ ಅವಕಾಶ ಮಾಡಿದ ನಂತರವೇ ಅಡುಗೆ ಕೆಲಸವನ್ನು ಆರಂಭಿಸಬೇಕು ಎಂದರು. ಅಗ್ನಿ ಅವಘಾತಗಳು ಅತ್ಯಂತ ಅಪಾಯಕಾರಿಯಾಗಿವೆ. ಬೆಂಕಿ ಹೊತ್ತಿಕೊಂಡರೆ ಕ್ಷಣಮಾತ್ರದಲ್ಲಿ ಎಲ್ಲವೂ ಭಸ್ಮವಾಗುತ್ತವೆ. ಸಾವು, ನೋವುಗಳೂ ಸಂಭವಿಸುವ ಸಾಧ್ಯತೆ ಅತಿಯಾಗಿರುತ್ತವೆ. ಹಾಗಾಗಿ ಮಕ್ಕಳಾದಿಯಾಗಿ ಮನೆಯ ಎಲ್ಲರೂ ಈ ವಿಷಯದಲ್ಲಿ ಎಚ್ಚರಿಕೆ, ಜಾಗೃತಿ ಹೊಂದಿರಬೇಕು ಎಂದರು.

ನಂತರ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಗ್ನಿಶಾಮಕ ವಾಹನ ಸುರಿಸಿದ ಕೃತಕ ಮಳೆಯಲ್ಲಿ ಮಿಂದೆದ್ದ ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಡದಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಮಕ್ಕಳ ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net