

ವಿಜಯವಾಣಿ ಸುದ್ದಿಜಾಲ ಹೊಸೂರು
ಕೃಷ್ಣಗಿರಿ ಜಿಲ್ಲೆ ಕೂತನಪಲ್ಲಿ ಪ್ರದೇಶದಲ್ಲಿನ ಟಾಟಾ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್‌ನ ಸೆಲ್‌ಪೋನ್ ಬಿಡಿ ಭಾಗಗಳ ತಯಾರಿಕಾ ಕಾರ್ಖಾನೆಯಲ್ಲಿ ಶನಿವಾರ ಅಗ್ನಿ ಅವಘಡ ಸಂಭಿಸಿದ್ದು, ಅದೃಷ್ಟವಶಾತ್ 3 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತತ 4 ಗಂಟೆಗಳ ಕಾರ್ಯಾಚರಣೆ ಮೂಲಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ.
ವಿವಿಧ ರಾಜ್ಯಗಳ ಸುಮಾರು 20 ಸಾವಿರ ಕಾರ್ಮಿಕರು ಕೆಲಸ ಮಾಡುವ ಟಾಟಾ ಕೈಗಾರಿಕೆಯಲ್ಲಿ ರಾತ್ರಿ ಪಾಳಿ ಮುಗಿಸಿದ ಸುಮಾರು 3 ಸಾವಿರ ಸಿಬ್ಬಂದಿ ಶನಿವಾರ ಬೆಳಗ್ಗೆ 6 ಗಂಟೆಗೆ ಮನೆಗೆ ತೆರಳುವ ವೇಳೆ ಕೆಮಿಕಲ್ ಪ್ಲಾಂಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ದಟ್ಟ ಹೊಗೆಯೊಂದಿಗೆ ಬೆಂಕಿ ಜ್ವಾಲೆ ಧಗಧಗಿಸಿದ್ದು, ಗಾಬರಿಗೊಂಡ ಕಾರ್ಮಿಕರು ದಿಕ್ಕಾಪಾಲಾಗಿ ಕೈಗಾರಿಕೆಯಿಂದ ಹೊರ ಓಡಿಬಂದಿದ್ದಾರೆ, ಮಾಹಿತಿ ತಿಳಿಯುತ್ತಿದ್ದಂತೆ ಡೆಂಕಣಿಕೋಟೆ, ರಾಯಕೋಟೆ ಸೇರಿ ಇನ್ನಿತರ ಭಾಗಗಳಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಜತೆಗೆ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಕಾರ್ಮಿಕರಿಗೆ ರಜೆ: ಅಗ್ನಿ ಅವಘಡ ಸಂಬಂಧ ರಾಯಕೋಟೈ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೆಂಕಿ ಅನಾಹುತದ ಬಗ್ಗೆ ತನಿಖೆ ನಡೆಯುತ್ತಿದೆ. ಕಾರ್ಖಾನೆಯ ಕೆಮಿಕಲ್ ಪ್ಲಾಂಟ್‌ನ ಭಾಗ ಭಾಗಶಃ ಹಾನಿಯಾಗಿದ್ದು ಕಾರ್ಮಿಕರಿಗೆ ರಜೆ ೋಷಿಸಲಾಗಿದೆ. ಅಗ್ನಿ ಅವಘಡದಲ್ಲಿ ಕಾರ್ಖಾನೆಯಲ್ಲಿನ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ಕಂಪನಿ ಖಚಿತಪಡಿಸಿದೆ. ಕಾರ್ಖಾನೆಯಲ್ಲಿ ಎಲ್ಲ ಬಗೆಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ, ಆದರೂ ಈ ದುರಂತ ನಡೆದಿರುವುದು ದುರಾದೃಷ್ಟಕರವಾಗಿದೆ, ಅಗ್ನಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ.