

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ ಬೆರೆಸಿ ಮಾರಾಟ ಮಾಡುವವರ ವಿರುದ್ಧ ಚಾಟಿ ಬೀಸಿರುವ ಹಾವೇರಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಆರು ತಿಂಗಳಲ್ಲಿ ಬರೋಬ್ಬರಿ 257 ಆಹಾರ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನಾಲ್ವರು ವ್ಯಾಪಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಈ ಹಿಂದೆ ಕೃತಕ ಬಣ್ಣ ಬಳಸಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ವರ್ಷದಲ್ಲಿ 22 ಪ್ರಕರಣ ದಾಖಲಾಗಿದ್ದು, ಇದರಲ್ಲಿ 5 ಪ್ರಕರಣದಲ್ಲಿ ಅಪರಾಧಿಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ. ಇನ್ನುಳಿದ ಪ್ರಕರಣ ವಿಚಾರಣೆ ಹಂತದಲ್ಲಿವೆ. ಆದರೆ, ರಾಜ್ಯ ಸರ್ಕಾರ ಗೋಬಿ ಮಂಚೂರಿ, ಕಲರ್ ಕ್ಯಾಂಡಿಗಳಿಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿದ ಬಳಿಕ 257 ಆಹಾರ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಅಲ್ಲದೆ, 9 ಗೋಬಿ ಮಂಚೂರಿ ಹಾಗೂ 8 ಚಿಕನ್ ಕಬಾಬ್ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿ ಕೃತಕ ಬಣ್ಣ ಕಂಡು ಬಂದ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಧಿಕಾರಿಗಳು ಇತರರಿಗೂ ಬಿಸಿ ಮುಟ್ಟಿಸಿದ್ದಾರೆ.
ಗೋಬಿ ಮಂಚೂರಿಗೆ ಕೃತಕ ಬಣ್ಣ ಬೆರೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ ನಂತರ ಜಿಲ್ಲೆಯಲ್ಲಿ ಆಹಾರ ಮತ್ತು ಗುಣಮಟ್ಟದ ಪರೀಕ್ಷೆ ಹೆಚ್ಚಿದೆ. ಮೊದಲ ಬಾರಿಗೆ ಎಚ್ಚರಿಕೆ ನೀಡುವ ಇಲಾಖೆ ಕ್ರಮದ ನಂತರವೂ ಮಾರಾಟಗಾರರು ಬದಲಾಗದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಿದೆ.
ದಂಡದ ಅಧಿಕಾರವಿಲ್ಲ:
ಬಣ್ಣ ಬೆರೆಸಿರುವುದು ಕಂಡುಬಂದ ವೇಳೆ ಅಧಿಕಾರಿಗಳಿಗೆ ದೂರು ದಾಖಲಿಸುವುದು ಬಿಟ್ಟರೆ ದಂಡ ವಿಧಿಸುವ ಅಥವಾ ಇನ್ಯಾವುದೇ ಕ್ರಮ ಕೈಗೊಳ್ಳುವ ಅಧಿಕಾರ ಇಲ್ಲ. ಒಂದು ವೇಳೆ ದಂಡ ವಿಧಿಸುವ ಅಥವಾ ಕ್ರಮ ಕೈಗೊಳ್ಳುವ ಅಧಿಕಾರ ಸಿಕ್ಕರೆ ಇನ್ನಷ್ಟು ಪ್ರಮಾಣದಲ್ಲಿ ಆಹಾರ ಸುರಕ್ಷತೆ ಸಾಧ್ಯವಾಗಲಿದೆ.
ಆಹಾರ ಪದಾರ್ಥಗಳಿಗೆ ಕನಿಷ್ಠ ಪ್ರಮಾಣದಲ್ಲಿ ಬಣ್ಣ ಬೆರೆಸಲು ಅವಕಾಶವಿದೆ. ಆದರೆ, ಗ್ರಾಹಕರನ್ನು ಆಕರ್ಷಿಸಲು ಅನೇಕ ವರ್ತಕರು ನಿಗದಿಗಿಂತ ಹೆಚ್ಚಿನ ಪ್ರಮಾಣದ ಬಣ್ಣ ಬೆರೆಸುತ್ತಿದ್ದಾರೆ. ಆದ್ದರಿಂದ ಇದರ ನಿಯಂತ್ರಣ ಅಗತ್ಯವಿದೆ ಎಂಬುದು ಅಧಿಕಾರಿಗಳು ಮತ್ತು ಆಹಾರ ತಜ್ಞರ ಅಭಿಪ್ರಾಯವಾಗಿದೆ.
ಎರಡೇ ದಿನದಲ್ಲಿ 43 ವ್ಯಾಪಾರಿಗಳಿಗೆ ನೋಟಿಸ್
ಜಿಲ್ಲಾದ್ಯಂತ ಆಹಾರ ಸುರಕ್ಷತಾಕಾರಿಗಳ ನೇತೃತ್ವದಲ್ಲಿ ಆ. 30ರಿಂದ ಎರಡು ದಿನದಲ್ಲಿ ಹೋಟೆಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿ ಆಹಾರ ಮಳಿಗೆ ಸೇರಿ 99 ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಆಹಾರ ಇಲಾಖೆ ಮಾರ್ಗಸೂಚಿ ಉಲ್ಲಂಘಿಸಿದ 43 ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಕೆಲವರಿಂದ 8,300 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಕಾರಿ ಡಾ. ನಾಗರಾಜ ಜೆ.ಎಸ್. ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ಶಿಕ್ಷೆ
ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ ಬಳಸಿರುವುದು ಕಂಡುಬಂದರೆ ಪ್ರಕರಣ ದಾಖಲಿಸಲಾಗುತ್ತದೆ. ಒಂದು ವೇಳೆ ಆರೋಪ ಸಾಬೀತಾದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮದಂತೆ 7 ವರ್ಷ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸುವ ಅವಕಾಶವಿದೆ.
ಕಾಯಂ ಅಧಿಕಾರಿಗಳೇ ಇಲ್ಲ...
ಹಾವೇರಿ ಜಿಲ್ಲೆಯಾದ ವರ್ಷದಿಂದಲೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಹುದ್ದೆ ಖಾಲಿಯಿದೆ. ಸದ್ಯ ದಾವಣಗೆರೆ ಅಂಕಿತಾಧಿಕಾರಿಯನ್ನು ಪ್ರಭಾರ ಎಂದು ನೇಮಕ ಮಾಡಲಾಗಿದೆ. ಅಲ್ಲದೆ, ಹಿರೇಕೆರೂರ, ಸವಣೂರಿನಲ್ಲೂ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆ ಖಾಲಿ ಇದೆ. ಇಲ್ಲಿಯೂ ಹೆಚ್ಚುವರಿಯಾಗಿ ಬೇರೆ ತಾಲೂಕಿನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳ ಕೊರತೆಯಿಂದ ಕಾರ್ಯಾಚರಣೆಗೆ ತೊಂದರೆ ಉಂಟಾಗಿದೆ.
ಸಾರ್ವಜನಿಕರಿಗೆ ನೈರ್ಮಲ್ಯ ಕಾಪಾಡಿಕೊಳ್ಳುವ ವಿಷಯದಲ್ಲಿ ಹೆಚ್ಚಿನ ಅರಿವಿನ ಅಗತ್ಯವಿದೆ. ಇಲಾಖೆ ವತಿಯಿಂದ ಎಲ್ಲ ತರಹದ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸಾರ್ವಜನಿಕರು, ವರ್ತಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲ ಆಹಾರ ಉದ್ಯಮದಾರರು ಆಹಾರ ಸುರಕ್ಷಿತ ಕಾಯ್ದೆಯಡಿ ನೋಂದಾಯಿಸಿಕೊಳ್ಳಬೇಕು. | ಡಾ. ನಾಗರಾಜ ಜೆ.ಎಸ್., ಪ್ರಭಾರ ಅಂಕಿತಾಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾವೇರಿ
------------------