ಬೆಟ್ಟಿಂಗ್ ದಂಧೆ ಎಫ್‌ಐಆರ್ ದಾಖಲು: ಸೈಬರ್ ಠಾಣೆಗೆ ದೂರು ನೀಡಿದ ಸಂತ್ರಸ್ತ

FIR registered for betting racket Mandya
Published on

ಮಂಡ್ಯ: ಮಂಡ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್, ಜೂಜಾಟ ದಂಧೆಗೆ ಕಡಿವಾಣ ಹಾಕುವಂತೆ ಸಂಘಟನೆಗಳು ನಡೆಸಿದ ಹೋರಾಟ ಫಲ ನೀಡಿದೆ. ಅದರಂತೆ ಕ್ರಿಕೆಟ್ ಬೆಟ್ಟಿಂಗ್ ಭಾಗಿಯಾಗಿರುವ ಆರೋಪದ ಮೇಲೆ ನಾಗೇಂದ್ರ ಎಂಬಾತನ ವಿರುದ್ಧ ಮಂಡ್ಯ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ನ.4ರಂದು ಎಫ್‌ಐಆರ್ ದಾಖಲಾಗಿದೆ.

ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಪ್ರೇರೆಪಿಸುತ್ತಿದ್ದ ಆರೋಪದ ಮೇಲೆ ಮಳವಳ್ಳಿ ತಾಲೂಕಿನ ನಾಗೇಂದ್ರ(29) ಎಂಬುವನ ವಿರುದ್ದ ರಾಜಣ್ಣ ಎಂಬಾತ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸ್ ಎಫ್‌ಐಆರ್ ಮಾಡಿದ್ದಾರೆ. ಎರಡು ಪುಟದ ದೂರಿನಲ್ಲಿ ಹಲವು ವಿಷಯ ಪ್ರಸ್ತಾಪಿಸಿರುವ ರಾಜಣ್ಣ, ನನಗೆ ಇಬ್ಬರು ಮಕ್ಕಳು. ಈ ಪೈಕಿ 2ನೇ ಮಗ ನನ್ನ ಜತೆ ವ್ಯವಸಾಯ ಮಾಡಿಕೊಂಡು ಇದ್ದಾನೆ. ನಮ್ಮ ಗ್ರಾಮದವನೇ ಆಗಿರುವ ನಾಗೇಂದ್ರ ನನ್ನ ಮಗನಿಗೆ ದಿಢೀರ್ ಶ್ರೀಮಂತಿಕೆಯ ಆಮಿಷ ಒಡ್ಡಿ ತಲೆ ಕೆಡಿಸಿ ಕ್ರಿಕೆಟ್ ಬೆಟ್ಟಿಂಗ್ ನಡೆಸುವುದರಲ್ಲಿ ತೊಡಗುವಂತೆ ಕುಮ್ಮಕ್ಕು ನೀಡುವುದರ ಜತೆಗೆ 2021 ಡಿಸೆಂಬರ್‌ನಿಂದ 2023 ಡಿಸೆಂಬರ್‌ವರೆಗೆ ಸುಮಾರು 20 ಲಕ್ಷ ರೂ.ಗಳನ್ನು ಕಳೆದುಕೊಳ್ಳುವಂತೆ ಮಾಡಿರುತ್ತಾನೆ ಎಂದು ವಿವರಿಸಿದ್ದಾರೆ.

ತದನಂತರ ಹಣ ವಸೂಲಿ ಮಾಡಲು ಬ್ಲಾಕ್ ಮೇಲ್ ಮೂಲಕ ಅಕ್ರಮವಾಗಿ ಹಣ ಸುಲಿಗೆ ಮಾಡಿದ್ದಾನೆ. ಮಾತ್ರವಲ್ಲದೆ ಆತ್ಮಹತ್ಯೆಗೂ ಪ್ರಚೋದನೆ ನೀಡಿದ್ದಾನೆ. ಹಲವು ಬಾರಿ ನಾಗೇಂದ್ರನಿಗೆ ಈ ಜೂಜಾಟದಲ್ಲಿ ನನ್ನ ಮಗನನ್ನು ತೊಡಗಿಸಬೇಡ ಎಂದು ಎಚ್ಚರಿಕೆ ನೀಡಿದ್ದರೂ ಕೇಳದೇ ಕಮಿಷನ್ ಆಸೆಗಾಗಿ ಜೂಜಿನಲ್ಲಿ ತೊಡಗಿಸುವಂತೆ ಮಾಡಿದ್ದಾನೆ. ಮಾತ್ರವಲ್ಲದೆ ಖಾಲಿ ಚೆಕ್ ಮತ್ತು ಆನ್ ಡಿಮಾಂಡ್ ಪತ್ರಕ್ಕೆ ಬಲವಂತವಾಗಿ ಸಹಿ ಪಡೆದಿದ್ದಾನೆ. ಆದ್ದರಿಂದ ನಮ್ಮ ಕುಟುಂಬದವರು ದಿನವೂ ಜೀವ ಕೈಯಲ್ಲಿ ಹಿಡಿದು ಬದುಕುವಂತೆ ಮಾಡಿದ್ದಾನೆ. ನ.4ರಂದು ಮತ್ತೆ ಹಣ ಕೊಡುವಂತೆ ನನ್ನ ಮಗನಿಗೆ ಕೇಳಿದ್ದು, ಈ ವೇಳೆ ಅಕ್ಕಪಕ್ಕದವರು ಬಿಡಿಸಿ ಕಳುಹಿಸಿದ್ದಾರೆ. ಆದ್ದರಿಂದ ಕ್ರಿಕೆಟ್ ಬುಕ್ಕಿಯಾಗಿ ಜೂಜಾಟ ಆಡಿಸುತ್ತಿರುವ ನಾಗೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಿ ನನ್ನ ಮಗನಿಗೆ ಆಗಿರುವ ಆನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

ಎನ್‌ಸಿಆರ್ ದಾಖಲಾಗಿತ್ತು: ಕಳೆದ 4 ತಿಂಗಳ ಹಿಂದೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಾಜಣ್ಣ ಇದೇ ವಿಚಾರವಾಗಿ ದೂರು ದಾಖಲಿಸಿದ್ದರು. ಆದರೆ ಅಂದು ಎನ್‌ಸಿಆರ್ ದಾಖಲಿಸಿ ಕೈತೊಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತುರ್ತು ಸಭೆ ಆಯೋಜಿಸಿದ್ದ ವೇಳೆ ಈ ವಿಷಯ ಪ್ರಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net