

ಶಿವಮೊಗ್ಗ: ಸಾಮಾಜಿಕ ಜಾಲತಾಣ ಎಕ್ಸ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಅವಹೇಳನ ಮಾಡಿದ ಮೋಹಿತ್ ನರಸಿಂಹಮೂರ್ತಿ ಎಂಬುವವನ ವಿರುದ್ಧ ವಿನೋಬನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಲು ಹಣವೇನು ನಿಮ್ಮಪ್ಪನ ಮನೆಯಿಂದ ತಂದಿದ್ದೀರಾ? ಸಾರ್ವಜನಿಕರ ಹಣ ಲೂಟಿ ಮಾಡಿ ನೀವು ಮತ್ತು ಕುಟುಂಬದವರು ಐಶಾರಾಮಿ ಜೀವನ ನಡೆಸುತ್ತಿದ್ದೀರಾ ಎಂದು ನ.27ರಂದು ಎಕ್ಸ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸಚಿವರನ್ನು ಮೋಹಿತ್ ಪ್ರಶ್ನೆ ಮಾಡಿದ್ದ.
ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ, ಸರ್ಕಾರದ ಯೋಜನೆಗಳ ವಿರುದ್ಧವಾಗಿ ಸುಳ್ಳು ಮಾಹಿತಿ ಪ್ರಸಾರ ಮಾಡಿ, ಸಾರ್ವಜನಿಕರನ್ನು ಉದ್ರೇಕಿಸಿದ ಆರೋಪದ ಹಿನ್ನೆಲೆಯಲ್ಲಿ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಇಲಾಖೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿದ್ಯಾರ್ಥಿಯೋರ್ವ ಸಚಿವರ ವಿರುದ್ಧ ಸಲ್ಲದ ಹೇಳಿಕೆ ನೀಡಿದ್ದು ದಾಖಲಾಗಿತ್ತು. ಇದರಿಂದ ಸಿಟ್ಟಾಗಿದ್ದ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿ ವಿರುದ್ಧ ಕ್ರಮ ಜರುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮೋಹಿತ್ ನರಸಿಂಹಮೂರ್ತಿ ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ಪೊಸ್ಟ್ ಹರಿಬಿಟ್ಟಿದ್ದ ಎನ್ನಲಾಗಿದೆ.