ಅನಧಿಕೃತ ಜಾಹೀರಾತು ಅಳವಡಿಸಿರುವವರ ವಿರುದ್ಧ ಎಫ್​ಐಆರ್: ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ

bbmp admeet
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಅಳವಡಿಸಿರುವವರ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲ ಎಂಟೂ ವಲಯಗಳಲ್ಲಿಯೂ ಅನಧಿಕೃತ ಜಾಹೀರಾತು ಅಳವಡಿಸಿರುವುದನ್ನು ಗುರುತಿಸಿ ಕೂಡಲೆ ಅದನ್ನು ತೆರವುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಒಂಟಿ ಮನೆ ಯೋಜನೆ ಅನುಷ್ಠಾನ:

ನಗರದಲ್ಲಿ ಒಂಟಿ ಮನೆ ಯೋಜನೆಗಳಿಗೆ ಅರ್ಜಿಗಳನ್ನು ಸಲ್ಲಿಸಿರುವವರ ಪೈಕಿ ಅರ್ಹ ಫಲಾನುಭವಿಗಳನ್ನು ಕೂಡಲೇ ಗುರುತಿಸಬೇಕು. ಆ ಬಳಿಕ ಹಂತ-ಹಂತವಾಗಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ಅರ್ಚನಾ, ಸ್ನೇಹಲ್, ವಿನೀತ್ ಪ್ರಿಯಾ, ರಮ್ಯಾ, ರಮೇಶ್, ಕರೀಗೌಡ ಹಾಜರಿದ್ದರು.

ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ:

ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯಗಳಲ್ಲಿ ಸಮೀಕ್ಷೆ ನಡೆಸಿ ಈವರೆಗೆ 27,655 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಇಂತಹ ವ್ಯಾಪಾರಿಗಳಿಗೆ ತ್ವರಿತವಾಗಿ ಗುರುತಿನ ಚೀಟಿ ನೀಡಿ ಅವರಿಗೆ ನಿಗದಿಪಡಿಸಿರುವ ಸ್ಥಳದಲ್ಲೇ ಮಾರಾಟ ಮಾಡಲು ಕ್ರಮವಹಿಸಬೇಕೆಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net