ಮರ ಕಡಿದವರ ವಿರುದ್ಧ ಎಫ್​ಐಆರ್

tree cut
Published on

ಬೆಂಗಳೂರು: ಬಿಬಿಎಂಪಿಯ ಮಹದೇವಪುರ ವಲಯದ ಸಾಯಿ ಸೆರಿನಿಟಿ ಲೇಔಟ್ ಹಾಗೂ ಕುಮಾರಪಾರ್ಕ್ ಪಶ್ಚಿಮದ ರೈಲ್ವೆ ಸಮಾನಾಂತರ ರಸ್ತೆ ಬದಿ ಬೆಳೆದು ನಿಂತಿದ್ದ ಮರವನ್ನು ಅನುಮತಿ ಇಲ್ಲದೆ ಕಡಿದುಹಾಕಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿ ಎಫ್​ಐಆರ್ ಹಾಕಲಾಗಿದೆ.

ಕೆ.ಆರ್.ಪುರ ಉಪವಿಭಾಗದ ಬಸವನಪುರ ವಾರ್ಡ್‌ನ ಸಾಯಿ ಸೆರಿನಿಟಿ ಲೇಔಟ್‌ನ ಸರ್ವೆ ನಂ. 6/3ಎ ಸ್ವತ್ತಿನ ಒಳಗಡೆ ಬೆಳೆದಿದ್ದ ಒಂದು ಮರವನ್ನು ಅರ್ಧ ಭಾಗಕ್ಕೆ ಕಡಿಯಲಾಗಿತ್ತು. ಜತೆಗೆ ಸರ್ವೆ ನಂ. 4/2ರ ಸ್ವತ್ತಿನಲ್ಲಿದ್ದ 4 ಮರಗಳನ್ನು ಕಡಿಯಲಾಗಿತ್ತು. ಇದಕ್ಕೆ ಕಾರಣರಾದ ಅನ್ನಿತ ಕಂಟ್ರೆಕ್ಷನ್ಸ್‌ನ ರಾಜೇಶ್ ಕೆ. ನಾಯ್ಡು ವಿರುದ್ಧ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976ರ ಕಲಂ 8ರನ್ವಯ ಎ್ಐಆರ್ ಹಾಗೂ 8(ಎ)/2024-25 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಸದರಿ ಸ್ವತ್ತಿನಲ್ಲಿ ಮಾವು, ಬೇವು ಸೇರಿ ಒಟ್ಟು ನಾಲ್ಕು ಮರಗಳು ಬೆಳೆದು ನಿಂತಿವೆ. ಕಟ್ಟಡ ನಿರ್ಮಿಸಲು ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಖಾಲಿ ನಿವೇಶನದಲ್ಲಿದ್ದ ಮರಗಳನ್ನು ಅನುಮತಿ ಪಡೆಯದೇ ಕತ್ತರಿಸಲಾಗಿದೆ. ತಪ್ಪಿತಸ್ಥನ ವಿರುದ್ಧ ವೃಕ್ಷ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿ ಎಫ್​ಐಆರ್ ಹಾಕಲಾಗಿದೆ ಎಂದು ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ರಾಸಾಯನಿಕ ಸುರಿದವನ ವಿರುದ್ಧ ಜನಾಕ್ರೋಶ:

ಇನ್ನೊಂದು ಪ್ರಕರಣದಲ್ಲಿ ಕುಮಾರಪಾರ್ಕ್ ಪಶ್ಚಿಮ ಬಡಾವಣೆಯ ರಸ್ತೆ ಬದಿ ಬೆಳೆದಿದ್ದ ಎರಡು ಮರಗಳಿಗೆ ರಾಸಾಯನಿಕ ಸುರಿದಿದ್ದ ವ್ಯಕ್ತಿಯ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಎರಡೂ ಮರಕ್ಕೂ ರಾಸಾಯನಿಕ ಸಿಂಪಡಿಸಿ ಒಣಗಿಸಿದ್ದನ್ನು ಸಾರ್ವಜನಿಕರು ಪಾಲಿಕೆಗೆ ಮಾಹಿತಿ ನೀಡಲಾಗಿತ್ತು. ದೂರು ಆಧರಿಸಿ ತಪ್ಪಿತಸ್ಥನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಡಾವಣೆಯ 10ನೇ ಅಡ್ಡರಸ್ತೆಯ ನಿವಾಸಿಯಾದ ಡಾ. ಅಶ್ವತ್ಥ್‌ರಾಮ್ ವಿರುದ್ಧ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕಾರ ಎಫ್​ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net