

ಬೆಂಗಳೂರು: ರೈತರ ಟ್ರ್ಯಾಕ್ಟರ್ ರ‌್ಯಾಲಿ ಸಂಬಂಧ ವಿವಾದಾತ್ಮಕ ಹೇಳಿಕೆ ಟ್ವೀಟ್ ಮಾಡಿದ ಆರೋಪದಡಿ ಕೇರಳ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೇರಳ ಕಾಂಗ್ರೆಸ್ ಸಂಸದ ಶಶಿ ತರೂರ್, ಇಂಡಿಯಾ ಟುಡೇ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ , ಮಿರ್ನಲ್ ಪಾಂಡೆ, ಜಾಫರ್ ಆಗಾ, ಅನಂತನಾಥ್, ಪರೇಶ್ ನಾಥ್, ವಿನೋದ್ ಕೆ. ಜೋಷ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಜ.26ರಂದು ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ರ‌್ಯಾಲಿ ನಡೆಸಿದರು. ಈ ವೇಳೆ ಉಂಟಾದ ಗಲಭೆಯಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ. ಸುಳ್ಳು ಸಂದೇಶ ಪ್ರಚಾರ ಮಾಡಿ ದ್ವೇಷ ಮತ್ತು ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ಉಂಟು ಮಾಡಿದ್ದು, ಧರ್ಮಗಳ ನಡುವೆ ದ್ವೇಷ ಭಾವನೆ ಉಂಟು ಮಾಡಿದ್ದಾರೆ. ಮತೀಯ ಭಾವನೆಗೆ ನೋವುಂಟು ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಖಾಸಗಿ ಕಂಪನಿ ನೌಕರ ಬಿ.ಎಸ್. ರಾಕೇಶ್ ಎಂಬುವರು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ.