ಕೆ.ಆರ್.ಆಸ್ಪತ್ರೆ ವೈದ್ಯೆ ಸೇರಿ ಮೂವರ ವಿರುದ್ಧ ಎಫ್‌ಐಆರ್

K.R. hospital- mysore
Published on

ಮೈಸೂರು: ಸಕಾಲಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದ ಪರಿಣಾಮ ಬಾಲಕಿ ಸೋನಿಯಾ(12) ಸಾವಿಗೀಡಾದ ಪ್ರಕರಣ ಸಂಬಂಧ ನಗರದ ಕೆ.ಆರ್.ಆಸ್ಪತ್ರೆ ವೈದ್ಯೆ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


ನಗರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಜಿ.ಶಿಲ್ಪಾ ಅವರು ನೀಡಿದ ದೂರು ಆಧರಿಸಿ ಕೆ.ಆರ್.ಆಸ್ಪತ್ರೆಯ ವೈದ್ಯೆ ಡಾ.ಚೈತ್ರಾ ಸೇರಿದಂತೆ ಮೂವರ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ತನಿಖೆ ನಡೆಯುತ್ತಿದೆ.


ಕೊಡಗಿನ ಸಂಗೀತಾ ಅವರ ಪುತ್ರಿ ಸೋನಿಯಾ ಶ್ವಾಸಕೋಶದ ಸೋಂಕು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಳು. ಮಗುವಿನ ತಾಯಿಯ ಕೋರಿಕೆ ಮೇರೆಗೆ ಈಕೆಯನ್ನು ನ್ಯಾಯಾಧೀಶೆ ಶಿಲ್ಪಾ ಅವರು ಕಳೆದ ಅಕ್ಟೋಬರ್ 26ರಂದು ಕೆ.ಆರ್.ಆಸ್ಪತ್ರೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು, ‘ಬೆಡ್ ಖಾಲಿ ಇಲ್ಲ’ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದರು.


ಖಾಸಗಿ ಆಸ್ಪತ್ರೆಯಲ್ಲಿ ದಿನಕ್ಕೆ 25ರಿಂದ 30 ಸಾವಿರ ರೂ. ಚಿಕಿತ್ಸಾ ವೆಚ್ಚವಾಗಲಿದೆ ಎಂದು ಅಲ್ಲಿನ ವೈದ್ಯರು ಹೇಳಿದ್ದರು. ಇಷ್ಟು ಹಣ ಭರಿಸುವಷ್ಟು ಆರ್ಥಿಕ ಶಕ್ತಿ ರೋಗಿಯ ಕುಟುಂಬಕ್ಕೆ ಇರಲಿಲ್ಲ. ಹೀಗಾಗಿ, ಮತ್ತೆ ಬಾಲಕಿಯನ್ನು ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಬಾಲಕಿಯನ್ನು ದಾಖಲಿಸಿಕೊಳ್ಳುವಂತೆ ಆಗ ಕರ್ತವ್ಯದಲ್ಲಿದ್ದ ವೈದ್ಯೆ ಡಾ.ಚೈತ್ರಾ ಅವರನ್ನು ಕೇಳಿದಾಗ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದರು.


ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ, ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ ಅವರನ್ನು ಸಂಪರ್ಕಿಸಿದ ಬಳಿಕ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು.


ಸಕಾಲದಲ್ಲಿ ಚಿಕಿತ್ಸೆ ನೀಡಲು ಮುಂದಾಗದ ಡಾ.ಚೈತ್ರಾ ಸೇರಿದಂತೆ ಮೂವರ ವಿರುದ್ಧ ದೇವರಾಜ ಪೊಲೀಸ್ ಠಾಣೆಗೆ ನ್ಯಾಯಾಧೀಶೆ ಶಿಲ್ಪಾ ದೂರು ನೀಡಿದ್ದರು. ಜತೆಗೆ, ಲೋಕಾಯುಕ್ತಕ್ಕೂ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಐಪಿಸಿ ಕಲಂ 337 ಮತ್ತು 338ರ ಅನ್ವಯ ಪ್ರಕರಣ ದಾಖಲಾಗಿತ್ತು. ಈ ನಡುವೆ, ನ. 4ರಂದು ಬಾಲಕಿ ಸೋನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.


ಬಾಲಕಿ ಮೃತಪಟ್ಟ ಹಿನ್ನೆಲೆಯಲ್ಲಿ ಡಾ.ಚೈತ್ರಾ ಸೇರಿದಂತೆ ಮೂವರ ವಿರುದ್ಧ ಐಪಿಸಿ 306ರಡಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಮುತ್ತುರಾಜು ತಿಳಿಸಿದ್ದಾರೆ.


ವೈದ್ಯರ ನಿರ್ಲಕ್ಷ್ಯದ ಬಗ್ಗೆ ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದು, ಈ ನಡುವೆ, ಡಾ.ಚೈತ್ರಾ ಸೇರಿದಂತೆ ಮೂವರ ನಿರ್ಲಕ್ಷ್ಯ ಕಂಡುಬಂದಿದೆ ಎಂಬುದರ ಬಗ್ಗೆ ಲೋಕಾಯುಕ್ತಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net